Belagavi News In Kannada | News Belgaum

ಸಂಸ್ಕೃತಿ ಅಳಿಸಲು ಅಸಹ್ಯಕರ ಪ್ರಯತ್ನ: ಸೋನಿಯಾ ಗಾಂಧಿ

ನವದೆಹಲಿ: ಭಾರತದ ಶ್ರೀಮಂತ ಪರಂಪರೆ ಅಳಿಸಿ ಹಾಕಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ನ 137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿರುವ ಅವರು, ವಿಭಜಕ ಸಿದ್ಧಾಂತಗಳು ದ್ವೇಷಿಯ ಮತ್ತು ಪೂರ್ವಾಗ್ರಹ ಪೀಡಿತ ಪರಿಸ್ಥಿತಿಯನ್ನು ನಿರ್ಮಿಸುತ್ತಿವೆ. ಜೊತೆಗೆ ಶಕ್ತಿ ಶಾಲಿ ಭಾರತ ಭದ್ರ ಬುನಾದಿಯನ್ನು ದುರ್ಬಲಗೊಳಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇತಿಹಾಸವನ್ನು ಸುಳ್ಳು ಮಾಡಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ. ಗಂಗಾ-ಜಮುನಾ ಸಂಸ್ಕೃಯನ್ನು ಅಳಿಸಿ ಹಾಕುವ ಹುನ್ನಾರಗಳು ನಡೆದಿವೆ. ಇದನ್ನೆಲ್ಲಾ ನೋಡಿಕೊಂಡು ಕಾಂಗ್ರೆಸ್ ಮೂಕ ಪ್ರೇಕ್ಷಕನಂತೆ ಉಳಿಯುವುದಿಲ್ಲ. ಭಾರತದ ಭವ್ಯ ಪರಂಪರೆಯನ್ನು ಅಳಿಸಿ ಹಾಕಲು ಕಾಂಗ್ರೆಸ್ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞಾ ಮಾಡಿದ್ದಾರೆ.

ಚುನಾವಣೆಯ ಏರಿಳಿತಗಳು ಅನಿವಾರ್ಯ ಮತ್ತು ನಿರಂತರ. ಅದು ಹೆಚ್ಚು ಪ್ರಸ್ತುತವಲ್ಲ. ವೈವಿದ್ಯಮಯ ಸಮಾಜದ ಎಲ್ಲ ಜನರ ಸೇವೆ ನಮ್ಮ ಬದ್ಧತೆಯಾಗಿದೆ. ಕಾಂಗ್ರೆಸ್‍ನ ಈ ಸಂಕಲ್ಪಕ್ಕೆ ಸಂದೇಹ ಬರುವಂತೆ ಯಾರು ನಡೆದುಕೊಳ್ಳಬಾರದು. ಜನ ವಿರೋಧಿ ಪಿತೂರಿಗಳನ್ನು ಎದುರಿಸಲು ಕಾಂಗ್ರೆಸ್ ಸಾಧ್ಯವಿರುವ ಎಲ್ಲಾ ತ್ಯಾಗಗಳನ್ನು ಮಾಡಲಿದೆ ಎಂದು ಹೇಳಿದರು.////