Belagavi News In Kannada | News Belgaum

ಬಿಜೆಪಿ – ಜೆಡಿಎಸ್‍ ಸೇರಿ ನನ್ನ ವಿರುದ್ಧ ಷಡ್ಯಂತ್ರ: ಡಿ.ಕೆ.ಶಿವಕುಮಾರ್

ಬೆಂಗಳೂರು: ನನ್ನ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‍ನವರು ಸೇರಿ ದೆಹಲಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ಎಲ್ಲ ಮಾಹಿತಿಯೂ ದೊರೆತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು, ಯಾವುದೇ ಷಡ್ಯಂತ್ರ ಮಾಡಿದರೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಯಾವುದೇ ಕಾರಣಕ್ಕೂ ಪಾದಯಾತ್ರೆಯಿಂದ ಹಿಂದೆ ಹೆಜ್ಜೆ ಇಡುವುದಿಲ್ಲ. ಅವರು ತಡೆದರೂ ಮುನ್ನಡೆಯುತ್ತೇವೆ. ಇದಕ್ಕಾಗಿ ಜೀವ ಹೋದರೂ ಪರವಾಗಿಲ್ಲ ಎಂದರು.
ಪಾದಯಾತ್ರೆಗೆ ನನಗೆ ಯಾವ ಅನುಮತಿಯೂ ಬೇಕಿಲ್ಲ. ನನ್ನ ಕಾಲು ನಾನು ನಡೆಯುತ್ತೇನೆ. ಜ.9ರಿಂದ ಪಾದಯಾತ್ರೆ ಆರಂಭವಾಗಲಿದೆ. 19ರವರೆಗೂ ನಡೆಯಲಿದೆ. ನಮ್ಮ ಪಕ್ಷದ ಶಾಸಕರು ಜೊತೆಯಲ್ಲಿರುತ್ತಾರೆ. ಇದು ಪಕ್ಷಾತೀತವಾದ ಹೋರಾಟ. ಜೆಡಿಎಸ್‍ನವರು, ಬಿಜೆಪಿಯವರು ಬಂದು ಭಾಗವಹಿಸಬಹುದು ಎಂದರು.
ಚಲನಚಿತ್ರದವರನ್ನು, ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇನೆ. ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ಹೋರಾಟ ಮಾಡಿದರೆ ಭಾಗವಹಿಸುತ್ತಿದ್ದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಇದು ಪಕ್ಷಾತೀತವಾದ ಹೋರಾಟ. ಅವರು ಬಂದೂ ಸೇರಿಕೊಳ್ಳಲಿ. ನನ್ನ ಒಬ್ಬನ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿಲ್ಲ. ಕುಡಿಯುವ ನೀರು ಮತ್ತು ಬೇಸಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಏನಾದರೂ ತಪ್ಪು ಮಾಡುತ್ತಿದ್ದರೆ ಕುಮಾರಸ್ವಾಮಿ ತಿದ್ದಲ್ಲಿ ಎಂದು ಹೇಳಿದರು.//////