Belagavi News In Kannada | News Belgaum

ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ರೈತ ಮತ್ತು ವಿಜ್ಞಾನಿಗಳ ಚರ್ಚಾಗೋಷ್ಠಿ

ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಆತ್ಮ ಯೋಜನೆ, ಕೃಷಿ ಇಲಾಖೆ ಬೆಳಗಾವಿ ಇವರ ಸಹಯೋಗÀದಲ್ಲಿ ರೈತರ ಮತ್ತು ವಿಜ್ಞಾನಿಗಳ ಚರ್ಚಾಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 29.12.2021 ರಂದು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಹೆಚ್. ಡಿ. ಕೋಳೇಕರ, ಉಪ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಣ್ಣು ಹಾಗೂ ನೀರು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಿದ್ದು ಅವುಗಳ ಸಮರ್ಥ ಬಳಕೆಯಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ರೈತರ ಆದಾಯ ವೃದ್ಧಿಸಲು ಭಾರತ ಸರಕಾರವು ಅನುಮೋದಿಸಿದ ಅಂಶಗಳಾದ ಉತ್ಪಾದಕತೆ ಹೆಚ್ಚಿಸುವುದು, ಹಾಲು ಉತ್ಪಾದನೆಯನ್ನು ಅಧಿಕಗೊಳಿಸುವುದು, ಸಂಪನ್ಮೂಲಗಳ ಸಮರ್ಪಕ ಬಳಕೆ, ಅಧಿಕ ಬೆಳೆ ಸಾಂದ್ರತೆ, ಅಧಿಕ ಬೆಲೆಯುಳ್ಳ ಬೆಳೆಗಳನ್ನು ಬೆಳೆಯುವುದು, ವೈಜ್ಞಾನಿಕ ಬೆಲೆ ಮತ್ತು ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಇತ್ಯಾದಿ ವಿಷಯಗಳ ಕುರಿತು ಇತ್ತೀಚಿನ ತಂತ್ರಜ್ಞಾನಗಳನ್ನು ರೈತರಿಗೆ ತಿಳಿಯಪಡಿಸುವ ಸಲುವಾಗಿ ರೈತ ವಿಜ್ಞಾನಿಗಳ ಚರ್ಚಾಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಬೆಲ್ಲ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಮತ್ತು ಆಹಾರ ಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಘಟಕಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ನೆರವನ್ನು ನೀಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ರೈತ ವಿಜ್ಞಾನಿಗಳ ಚರ್ಚಾಗೋಷ್ಠಿಯನ್ನು ಆಯೋಜನೆಯ ಉದ್ದೇಶ ಮತ್ತು ರೂಪುರೇಷೆ ಕುರಿತು ವಿವರಿಸಿದರು ಹಾಗೂ ಹಿಂಗಾರು ಹಾಗೂ ಬೇಸಿಗೆ ಬೆಳೆಗಳಲ್ಲಿ ಬರುವ ರೋಗ ಹಾಗೂ ಕೀಟಗಳ ನಿರ್ವಹಣಾ ಕ್ರಮಗಳನ್ನು ತಿಳಿಸಿದರು.
ವಿಜ್ಞಾನಿ ಎಸ್. ಎಮ್. ವಾರದ ಸವಳು ಹಾಗೂ ಕ್ಷಾರ ಮಣ್ಣುಗಳ ಉಂಟಾಗುವಿಕೆ ಹಾಗೂ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಸವಳುಯುಕ್ತ/ಕ್ಷಾರಯುಕ್ತ ನೀರಿನಿಂದ ನೀರಾವರಿ ಮಾಡುವುದರಿಂದ ಹಾಗೂ ನೀರು ಬಸಿಯುವಿಕೆಗೆ ಅವಕಾಶವಿಲ್ಲದಾಗ ಸವಳು ಹಾಗೂ ಕ್ಷಾರಯುಕ್ತ ಮಣ್ಣುಗಳು ಉಂಟಾಗುತ್ತವೆ. ಸವಳು ಮಣ್ಣು ಉಂಟಾಗದಂತೆ ರೈತರು ಮಿತವಾಗಿ ನೀರಾವರಿ ಮಾಡಬೇಕು ಮತ್ತು ಕೊಳವೆ ಬಾವಿ ತೆರೆದ ನಂತರ ನೀರಿನ ಪರೀಕ್ಷೆ ಮಾಡಿಸಿ ಅದರ ಗುಣಮಟ್ಟ ತಿಳಿದು ನೀರಾವರಿ ಮಾಡಬೇಕು. ಹಸಿರು ಗೊಬ್ಬರ ಬೆಳೆ ಡೈಂಚಾವನ್ನು ಬಿತ್ತನೆ ಮಾಡಿ, ಬೆಳೆಯ 45 ದಿವಸಗಳ ನಂತರ ಮಣ್ಣಿಗೆ ಸೇರಿಸಿ ಸುಧಾರಿಸಬೇಕು ಎಂದು ಸಲಹೆ ನೀಡಿದರು
ವಿಜ್ಞಾನಿ ಜಿ. ಬಿ. ವಿಶ್ವನಾಥ ಹಿಂಗಾರಿ ಮತ್ತು ಬೇಸಿಗೆ ಬೆಳೆಗಳ ಸಮಗ್ರ ಬೇಸಾಯ ಕುರಿತು ಮಾಹಿತಿ ನೀಡಿದರು. ಅದೇರೀತಿ ವಿಜ್ಞಾನಿ ಪ್ರವೀಣ ಯಡಹಳ್ಳಿ ತೋಟಗಾರಿಕೆ ಬೆಳೆಗಳ ಬಗ್ಗೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಎಮ್. ಸಿ. ಮಠದ, ಉಪಯೋಜನಾ ನಿರ್ದೇಶಕರು, ಆತ್ಮ ಯೋಜನೆ, ಕೃಷಿ ಇಲಾಖೆ, ಬೆಳಗಾವಿ ಇವರು ಸ್ವಾಗತಿಸಿದರು ಹಾಗೂ ಶ್ರೀ ಎಸ್. ಎಮ್. ವಾರದ ವಂದಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಹತ್ತು ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.