Belagavi News In Kannada | News Belgaum

ಅಲ್ಪಸಂಖ್ಯಾತರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ – ಧನ್ಯಕುಮಾರ ಗುಂಡೆ

ಬೆಳಗಾವಿ.ಡಿ.: ಅಲ್ಪಸಂಖ್ಯಾತರ ಸಮಾಜದ ಅಭಿವೃದ್ದಿಗೆ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ದೊರಕುವಂತೆ ಮಾಡುವ ಮೂಲಕ ಅಲ್ಪ ಸಂಖ್ಯಾತರ ಸಮಾಜಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ನಾಮ ನಿರ್ದೇಶಿತ ಸದಸ್ಯ ಧನ್ಯಕುಮಾರ ಗುಂಡೆ ಅವರು ಹೇಳಿದರು.

ಸೋಮವಾರದಂದು ಬೆಳಗಾವಿ ಸಕ್ರ್ಯುಟ್ ಹೌಸದಲ್ಲಿ ಬೆಳಗಾವಿ ಜಿಲ್ಲೆಯ ಜೈನ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಲ್ಪ ಸಂಖ್ಯಾತರಿಗೆ ಸಿಗುವ ಸಲವತ್ತುಗಳನ್ನು ಸಮಪರ್ಕವಾಗಿ ಅವರಿಗೆ ತಲುಪಿಸುವಲ್ಲಿ ಮತ್ತು ಅವರಿಗೆ ಬೇಕಾಗುವ ಎಲ್ಲ ನೆರವು ಮತ್ತು ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ನಿರಂತರವಾಗಿ ಸಲಹೆಗಳನ್ನು ನೀಡಬೇಕು. ಇದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಸಮಾರಂಭದಲ್ಲಿ ವಿನೋದ ದೊಡ್ಡಣ್ಣವರ, ಪ್ರಮೋದ ಪಾಟೀಲ, ವಿಕ್ರಮ ಜೈನ, ಪಿ .ಜಿ. ಕೆಂಪಣ್ಣವರ, ನಾಗರಾಜ ಮರೆಣ್ಣವರ, ಪುಷ್ಪಕ ಹನಮಣ್ಣವರ ಸೇರಿದಂತೆ ಮೊದಲಾದವರು ಮಾತನಾಡಿದರು. ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆ, ಮಾಣಿಕಬಾಗ ದಿಗಂಬರ ಜೈನ ಬೊರ್ಡೀಂಗ, ಜೈನ ಇಂಟರ್‍ನ್ಯಾಷನಲ್ ಟ್ರೆಡ ಆರ್ಗನೈಝೇಶನ, ಜೈನ ಯುವ ಸಂಘಟನೆ, ಭಾರತೀಯ ಜೈನ ಮಿಲನ, ಭಾರತೀಯ ಜೈನ ಸಂಘಟನೆ, ಜೈನ ಶಿಕ್ಷಕರ ವೇದಿಕೆ . ಅಖಿಲ ಭಾರತ ಅಲ್ಪಸಂಖ್ಯಾತರ ಒಕ್ಕೂಟ, ಕರ್ನಾಟಕ ಜೈನ ಅಸೋಶಿಯೇಶನ, ಎಸ್.ಡಿ.ಎಂ. ಧಾರವಾಡ ಸೇರಿದಂತೆ ಮೊದಲಾದ ಸಂಸ್ಥೆಗಳ ಪದಾಧಿಕಾರಿಗಳು ಧನ್ಯಕುಮಾರ ಗುಂಡೆ ಅವರನ್ನು ಸನ್ಮಾನಿಸಿದರು. ಪತ್ರಕರ್ತ ಹಾಗೂ ಜೈನ ಯುವ ಸಂಘಟನೆಯ ಪ್ರಮುಖ ಪದಾಧಿಕಾರಿ ಕುಂತಿನಾಥ ಕಲಮನಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಯ ಅವಲಕ್ಕಿ ವಂದಿಸಿದರು.