Belagavi News In Kannada | News Belgaum

ಪ್ರಥಮ ಬಾರಿಗೆ ಕೆಂಭಾವಿ ಪುರಸಭೆ ಬಿಜೆಪಿ ತೆಕ್ಕೆಗೆ; ಹರ್ಷ ಮೆರೆದ ಕಾರ್ಯಕರ್ತರು

 

ಕೆಂಭಾವಿ: ಪಟ್ಟಣದ ಪುರಸಭೆಗೆ 27 ರಂದು ನಡೆದ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಒಟ್ಟು 23 ವಾರ್ಡಗಳಲ್ಲಿ 13 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರ ಮೂಲಕ ವಿಜಯದ ನಗೆ ಬೀರಿದೆ. ಇನ್ನುಳಿದಂತೆ 8 ಕಾಂಗ್ರೆಸ್‌ ಹಾಗೂ 2 ಇತರೆ ಗೆಲುವಾಗಿದೆ.

ಕೆಂಭಾವಿ ಪುರಸಭೆಯ ಎರಡನೆ ಅವಧಿಯ ಚುನಾವಣೆ ಇದಾಗಿದ್ದು, ಮೊದಲ ಅವದಿಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಇದ್ದ ಅಧಿಕಾರ ಈ ಬಾರಿ ಬಿಜೆಪಿ ನಿಚ್ಚಳವಾಗಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇದರಿಂದ ಶಹಪೂರ ಮತಕ್ಷೇತ್ರದ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ರವರಿಗೆ ಮುಖಭಂಗವಾದರೆ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ್ ಹಾಗೂ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಗೆಲುವಿನ ನಗೆ ಬೀರಿದ್ದಾರೆ.

ಮುಗಿಲು ಮುಟ್ಟಿದ ಹರ್ಷೋದ್ಗಾರ: ಪಟ್ಟಣದ ಪುರಸಭೆಯ 13 ವಾರ್ಡಗಳಲ್ಲಿ ವಿಜಯ ಸಾಧಿಸುವದರೊಂದಿಗೆ ಆಡಳಿತಕ್ಕೆ ಪ್ರಥಮ ಬಾರಿಗೆ ಬಹುಮತ ಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಜಯಘೋಷ ಹಾಕುತ್ತಾ ಸಿಹಿ ಹಂಚಿ ಸಂಭ್ರಮಿಸಿ ಪಟಾಕಿ ಸಿಡಿಸಿ ಹರ್ಷೋದ್ಗಾರ ಮೆರೆದರು. ಈ ಸಂದರ್ಭದಲ್ಲಿ ಶಹಪೂರ ಮತಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು, ಗೆಲುವಿನ ಅಭ್ಯರ್ಥಿಗಳು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.