Belagavi News In Kannada | News Belgaum

ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಪಂಜಾಬ್​ನಲ್ಲಿ ಭದ್ರತಾ ವೈಫಲ್ಯವಾಗಿದ್ದು, ಕೇಂದ್ರ ಸರ್ಕಾರದಿಂದಲೇ ಹೊರತು ಪಂಜಾಬ್​ಸರ್ಕಾರದಿಂದಲ್ಲ ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಕುರಿತು ಪ್ರಧಾನಿಗಳ ಕಚೇರಿ ಹಾಗೂ ಬಿಜೆಪಿ ವಕ್ತಾರರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಾಯಿಗೆ ಬಂದ ಹಾಗೇ ಮಾತನಾಡ್ತಾ ಇದ್ದಾರೆ.ಆದರೆ ಭದ್ರತಾ ವೈಫಲ್ಯ ಆಗಿದ್ದು, ಕೇಂದ್ರ ಸರ್ಕಾರದಿಂದಲೇ ಹೊರತು ಪಂಜಾಬ್​ಸರ್ಕಾರದಿಂದಲ್ಲಎಂದರು.
ಪಂಜಾಬ್ ಸರ್ಕಾರ ಒಬ್ಬ ದಲಿತ ಸಿಎಂ ನಾಯಕತ್ವದಲ್ಲಿ ನಡೆಯುತ್ತಿದೆ. ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಸರಳ ಸಜ್ಜನ ಹಾಗೂ ಮೃದುಭಾಷಿ. ಅಂತಹ ಸಜ್ಜನ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಹೋಗುವ ಜಾಗಕ್ಕೆ ಎಸ್​ಜಿಪಿ, ಗುಪ್ತಚರ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಮೊದಲೇ ಹೋಗಿರುತ್ತಾರೆ. ಆ ಕಾರ್ಯಕ್ರಮದಲ್ಲಿ ಯಾರು ಯಾರು ಇರಬೇಕು ಎಂದು ನಿರ್ಧರಿಸುತ್ತಾರೆ. ಪ್ರಧಾನಿಗಳ ಕಾರ್ಯಕ್ರಮದ ಎಲ್ಲ ವಿವರಗಳನ್ನೂ ಪಂಜಾಬ್ ಸರ್ಕಾರಕ್ಕೆ ಕಳಿಸಿದ್ದಾರೆ. ಆದರೆ, ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಮಾಡಿಲ್ಲ. ಅವರು ಫಿರೋಜ್​ಪುರದಲ್ಲಿ ಬೃಹತ್ ಸಭೆ ಮಾಡಬೇಕಿತ್ತು. ಅಲ್ಲಿ ಅವರ ನಿರೀಕ್ಷೆಯಂತೆ ಜನ ಸೇರಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಟೀಕಿಸಿದ್ದಾರೆ.
ಒಂದು ವೇಳೆ ನಮ್ಮ ಕಾರ್ಯಕ್ರಮ ಹಾಗಾಗಿದ್ದರೆ ನಮ್ಮನ್ನು ಮುಂಜಾನೆಯಿಂದ ಸಂಜೆ ತನಕ ಅವರು ಹರಾಜ್ ಹಾಕುತ್ತಿದ್ದರು. ಅಲ್ಲಿ ಪೋಲಿಸರೇ 5 ಸಾವಿರ ಜನ ಇದ್ದರು. ಹೀಗಾಗಿ, ಹೇಗೆ ಮಾಡಬೇಕು ಎಂದು ಯೋಚಿಸಿ ಈ ರೀತಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಪ್ರಕಾರ ಅಲ್ಲಿಗೆ ಹೋಗಬೇಕಿತ್ತು. ಆದರೆ, ಜನ ಸೇರದ ಸಿಟ್ಟನ್ನು ಪಂಜಾಬ್ ಸರ್ಕಾರದ ಮೇಲೆ ತೋರಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಹೋಗುವವರು ಕೊನೆಯ 20 ನಿಮಿಷದಲ್ಲಿ ಅವರು ದಾರಿ ಬದಲಿಸಿದ್ದಾರೆ. ಐಬಿ ಡೈರೆಕ್ಟರ್ ಸಿಚುಯೇಷನ್ ಸರಿ ಇದೆ ಅಂತ ಹೇಳಿದ್ದರು. ಪಂಜಾಬ್ ಮುಖ್ಯ ಕಾರ್ಯದರ್ಶಿ ರೈತರು ಮನವಿ ಮಾಡುವ ಬಗ್ಗೆ ಹೇಳಿದ್ದರು. ಪಂಜಾಬ್ ಸರ್ಕಾರ ಸ್ಥಳೀಯ ವಾತಾವರಣವನ್ನು ತಿಳಿಸಿದ್ದರು. ಆದರೂ ಮೋದಿ ಪ್ಲಾನ್ ಬದಲಿಸಿ 10 ಕಿ.ಮೀ. ರಸ್ತೆಯಲ್ಲೇ ಹೋದರು. ಅವರಿಗೆ ಇಂದಿರಾ ಗಾಂಧಿಗಿರುವ 10 ಪಟ್ಟು ಭದ್ರತೆ ಇತ್ತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನಾನು ರಸ್ತೆಯಲ್ಲಿ ಹೋಗಬೇಕಾದರೂ ನರೇಂದ್ರ ಮೋದಿ ಬರುತ್ತಿದ್ದಾರೆ ಅಂದರೆ 5 ನಿಮಿಷ ಮೊದಲೇ ಟ್ರಾಫಿಕ್ ನಿಲ್ಲಿಸುತ್ತಾರೆ. ನಾನು ನನ್ನ ಕಚೇರಿಗೆ ಹೋಗುವಾಗಲೂ ಮೋದಿ ಬರುತ್ತಿದ್ದಾರೆಂದರೆ ತಡೆಯುತ್ತಾರೆ. ನಾನು ಗಲಾಟೆ ಮಾಡಿದ ಬಳಿಕ ಬಿಟ್ಟಿದ್ದಾರೆ. ಇದು ನನಗೇ ಆದ ಅನುಭವ. ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ನಿವೃತ್ತಿ ನ್ಯಾಯಮೂರ್ತಿಯಿಂದ ಈಗಾಗಲೇ ಪ್ರಕರಣ ತನಿಖೆಗೆ ಕೊಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕರಣವನ್ನು ತನಿಖೆಗೆ ನೀಡಿದೆ. ಬೆಳಿಗ್ಗೆ ಈ ಬಗ್ಗೆ ನನಗೆ ಪಂಜಾಬ್ ಸಿಎಂ ಮಾಹಿತಿ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.//////