Belagavi News In Kannada | News Belgaum

ಇಪ್ಪತೈದಕ್ಕೂ ಅಧಿಕ ತಂಡಗಳಿಗೆ ಡೊಳ್ಳಿನ ಹಾಡಿಕೆ ತರಬೇತಿ ಹಾಲುಮತ ಪರಂಪರೆ ಉಳಿವಿಗೆ ಮಾಳಹಳ್ಳಿಯ ಸಿದ್ದಣ್ಣ ಮಾಸ್ತರ ಕೊಡುಗೆ ಅಪಾರ

ಕೆಂಭಾವಿ: ಡೊಳ್ಳಿನ ಹಾಡು, ಡೊಳ್ಳು ಕುಣಿತವೆಂದರೆ ನಮಗೆ ತಟ್ಟನೆ ನೆನಪಿಗೆ ಬರುವುದು ಹಾಲುಮತ ಸಂಸ್ಕøತಿ ಮತ್ತು ಪರಂಪರೆ. ನಮ್ಮ ಉತ್ತರ ಕರ್ನಾಟಕ ಜಾನಪದ ಸಂಸ್ಕತಿ, ಪರಂಪರೆಗಳ ತವರೂರು. ಇಲ್ಲಿ ಈ ನೆಲದಲ್ಲಿ ವಿಭಿನ್ನ ಜಾನಪದ ಕಲಾ ಪ್ರಕಾರಗಳು ಕಾಣುತ್ತೆವೆ. ಇಂತಹ ವಿಭಿನ್ನ ಹಾಗೂ ಜನಪದದಲ್ಲಿ ಗಂಡು ಕಲೆಯಂತಿರು ಡೊಳ್ಳಿನ ಹಾಡಿಕೆ(ಭಜನೆ) ಉಳಿಸಿ ಬೆಳೇಸುವ ನಿಟ್ಟಿನಲ್ಲಿ ಅನೇಕರು ತೆರೆಮರೆಯಲ್ಲಿ ಶ್ರಮವಹಿಸುತ್ತಾ ಕಲಾ ಪೋಷಣೆಗೆ ಮುಂದಾಗಿರುವುದರ ಪರಿಣಾಮ ಇಂದು ಅದೆಷ್ಟೋ ಜಾನಪದ ಸಂಸ್ಕøತಿಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದೇ ಹೇಳಬಹುದು.


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪುಟ್ಟ ಹಳ್ಳಿ ಮಾಳಿಂಗೇಶ್ವರ ಸುಕ್ಷೇತ್ರ ಮಾಲಹಳ್ಳಿ. ಈ ಹಳ್ಳಿಯಲ್ಲಿ ಜಾನಪದ ಪ್ರತಿಭೆಯೊಂದು ಹಾಲುಮತ ಪರಂಪರೆ ಉಳಿವಿಗೆ ಶ್ರಮವಹಿಸುತ್ತಿರುವುದ ನಿಜಕ್ಕೂ ಶ್ಲಾಘನಿಯ ಕಾರ್ಯವೆ ಸರಿ. ಇಂತಹ ಮಹತ್ಕಾರ್ಯ ಸದ್ದಿಲ್ಲದೆ ಮಾಡುತ್ತಿರುವ 33 ರ ಹರೆಯದ ಸಿದ್ದಣ್ಣ ದೊಡಮನಿ ಯಾದಗಿರಿ ಜಿಲ್ಲೆ ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಗಳಲ್ಲಿ ಡೊಳ್ಳಿನ ಹಾಡಿಕೆಯ ಹಲವಾರು ತಂಡಗಳನ್ನು ಕಟ್ಟಿ ಸೂಕ್ತ ತರಬೇತಿ ನೀಡುತ್ತಾ ಹಾಲುಮತ ಪರಂಪರೆ/ ಸಂಸ್ಕøತಿ ಉಳಿಸಿ ಬೆಳೇಸುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.

ಪದವಿ ಶಿಕ್ಷಣ ಮುಗಿಸಿರುವ ಸಿದ್ದಣ್ಣ ದೊಡ್ಡಮನಿ ಇವರು ಸುತ್ತ ಹತ್ತಾರು ಹಳ್ಳಿಗೆಳಿಗೆ ಸಿದ್ದಣ್ಣ ಮಾಸ್ತರ ಎಂದೆ ಚಿರಪರಿಚಿತರಾಗಿದ್ದಾರೆ. ದೊಡಮನಿ ಇವರು ಕುಟುಂಬ ನಿರ್ವಹಣೆಗೆ ಪರ್ನಿಚರ್ ಅಂಗಡಿ ಮಾಡಿಕೊಂಡಿದ್ದು, ಹಾಲುಮನ ಸಂಸ್ಕøತಿ ಉಳಿವಿಗಾಗಿ ತಮ್ಮದೆಯಾದ ಸಮಯ ಕೊಡುತ್ತಾ ಇಲ್ಲಿಯವರೆಗೆ ಸುಮಾರ 25 ಕ್ಕೂ ಹೆಚ್ಚು ಡೊಳ್ಳಿನ ಹಾಡಿಕೆಯ ತಂಡಗಳನ್ನು ಕಟ್ಟಿ ತರಬೇತಿ ನೀಡಿದ್ದಾರೆ. ಈ ಎಲ್ಲಾ ತಂಡಗಳು ನಾಡಿನ ಹಲವು ಕಡೆಗಳಲ್ಲಿ ಡೊಳ್ಳಿನ ಹಾಡಿಕೆಯ ಪ್ರದರ್ಶನ ನೀಡುವುದರ ಮೂಲಕ ಮಾಸ್ತರ ಸಿದ್ದಣ್ಣ ದೊಡಮನಿಯವರ ಹೆಸರು ಉಳಿಸಿ ಬೆಳೆಸುತ್ತಿವೆ.

ಡೊಳ್ಳಿನ ಹಾಡುಗಳು ಎಂದರೆ, ಕುರುಬರ ಹಾಡುಗಳು. ಅವು ಹಾಲುಮತ ಸಂಸ್ಕøತಿಯ ಪ್ರತಿಬಿಂಭ. ಈ ಹಾಡಿಕೆಗಳಲ್ಲಿ ಹಾಲುಮತ ಆರಾದ್ಯ ದೈವ ಬೀರಲಿಂಗ ದೇವರ ಪ್ರಾಥನೆ, ಆತನ ಮಹಿಮೆಯನ್ನು ಕೊಂಡಾಡುವುದಲ್ಲದೆ, ಹಾಡಿಕೆಯಲ್ಲಿ ಅನೇಕ ಪೌರಾಣಿಕ ಕಥೆ, ಪುರಾಣ ಪುರುಷರ ಚರಿತ್ರೆಗಳನ್ನು ಹಾಡಿನರೂಪದಲ್ಲಿ ಎಳೆ ಎಳೆಯಾಗಿ ಪ್ರಸ್ತುತ ಪಡಿಸುವ ಕಲಾ ಕೌಶಲ್ಯವೆ ಇದರ ಪರಿಯಾಗಿದೆ. ಈ ಹಾಡಿಕೆಯನ್ನು ಮಾಸ್ತರ ಸಿದ್ದಣ್ಣರವರಿಂದ ಕೇಳಿದರೆ ಅವರ ಹಾಡಿನ ಪರಿಯಲ್ಲಿ ಪುರಾಣ ಕಥೆ ನಮ್ಮ ಕಣ್ಣ ಮುಂದೆ ಬಂದು ನಿಂತಂತೆ ಬಾಸವಾಗುತ್ತದೆ.

ಕುರುಬ ಜನಾಂಗದಲ್ಲಿ ಡೊಳ್ಳಿನಹಾಡಿಕೆ ಪ್ರಚಲಿತದಲ್ಲಿರುವುದು ಅಷ್ಟೆ ಅಲ್ಲದೆ ಜನಪ್ರೀಯ ಜಾನಪದ ಕಲಾಪ್ರಕಾರವು ಹೌದು. ಇಂತಹ ಹಾಲುಮತ ಸಂಸ್ಕøತಿ ಪರಂಪೆಯ ಪೋಷಣೆಗೆ ಮುಂದಾದ ಸಿದ್ದಣ್ಣ ಮಾಸ್ತರ ಸ್ವತಹ ಒಬ್ಬ ಸಾಹಿತಿಯಾಗಿ ಹಾಲುಮತ ಚರಿತೆಗೆ ಸಂಬಂದಿಸಿದಂತೆ ಸುಮಾರು 50 ಕ್ಕೂ ಅಧೀಕ ಡೊಳ್ಳಿನ ಪದಗಳನ್ನು ರಚಿಸಿದ್ದು ಇವರ ರಚನೆಗಳು ಅನೇಕ ಕಡೆಗಳಲ್ಲಿ ಹಲವಾರು ತಂಡಗಳು ಪ್ರಸ್ತುತ ಪಡಿಸುತ್ತಿವೆ. ಇದು ಅವರ ಸಾಹಿತ್ತೀಕ ಪ್ರೌಢಿಮೆಯನ್ನು ಗುರುತಿಸುವಂತಹುದಾಗಿದೆ. ಪ್ರತಿಭೆಯನ್ನು ಗರುತಿಸಿ ಜನಪದ ಪರಿಷತ್ತಿನಿಂದ ಜಾನಪದ ಸಾಹಿತ್ಯ ರತ್ನ ಹಾಗೂ ಕಲಾ ರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕಾರಗಳು ಸಂದಿವೆ.

ಹೀಗೆ ಎಲಮರೆ ಕಾಯಿಯಂತೆ ಜಾನಪದ ಪರಂಪರೆ ಉಳಿವಿಗೆ ನಿರಂಥ ಪರಿಶ್ರಮ ಪಡುತ್ತಿರುವ ಮಾಳಹಳ್ಳಿ ಗ್ರಾಮದ ಸಿದ್ದಣ್ಣ ಮಾಸ್ತರ ಇವರಿಗೆ ಜಾನಪದ ವಿಶ್ವವಿದ್ಯಾಲಯಗಳು, ಜನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು ಗುರುತಿಸಿ ಗೌರವಿಸುವಂತ ಕೆಲಸವಾಗಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವರಿಯಿಂದ ನಡೆಯುವ ಗುರು ಶಿಷ್ಯ ಪರಂಪರೆಯಲ್ಲಿ ಹಮ್ಮಿಕೊಳ್ಳುವ ತರಬೇತಿ ನೀಡಲು ಆಯ್ಕೇ ಮಾಡಿಕೊಳ್ಳುವುದರ ಮೂಲಕ ಸಹಾಯ ಧನ ಕಲ್ಪಿಸುವುದರ ಮೂಲಕ ಕಲೆಯನ್ನು ಉಳಿಸುತ್ತಿರುವ ಪ್ರತಿಭೇಗೆ ಪ್ರೋತ್ಸಹಾ ನೀಡುವಂತಾಗಲಿ ಎಂಬುವುದೆ ಜಾನಪದ ಹಂಬಲಿಗರ ಒತ್ತಾಸೆಯಾಗಿದೆ.

 

ವೀರಣ್ಣ ಕಲಕೇರಿ