Belagavi News In Kannada | News Belgaum

ರಕ್ತದಾನ ಪವಿತ್ರ ಕಾರ್ಯ : ಡಾ. ವೀರಗಿ

ಬೆಳಗಾವಿ: ಇತ್ತೀಚಿನ ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪರಿಮಿತ ಸಂಶೋಧನೆಗಳು ಜರುಗಿವೆ. ಆದರೂ ಕೂಡ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಹಾಗಾಗೀ ರಕ್ತದಾನವೇ ರಕ್ತ ಬೇಡಿಕೆಯನ್ನು ನೀಗಿಸುವುದು ಎಂದು ಕೆಎಲ್‍ಇ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಎಸ್. ವಿ. ವೀರಗಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ ಮತ್ತು ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸೋಮವಾರ ವಿವಿಯ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ತಕ್ಕೆ ಪರ್ಯಾಯಾವಾದ ವಸ್ತು ಜಗತ್ತಿನಲ್ಲಿಲ್ಲ. ಸಂಶೋಧನೆಗಳು ಎಷ್ಟೇ ವ್ಯಾಪಕವಾಗಿ ನಡೆದಿದ್ದರೂ ಈವರೆಗೆ ಆರೋಗ್ಯಯುತವಾದ ಮಾನವನ ದೇಹವೆ ರಕ್ತವನ್ನು ನೈಸರ್ಗಿಕವಾಗಿ ಸೃಷ್ಟಿಸುತ್ತದೆ. ಹಾಗಾಗೀ ಎಲ್ಲರೂ ನಿಯಮಿತವಾಗಿ ವರ್ಷದಲ್ಲಿ ಮೂರು ಬಾರಿಯಾದರೂ ರಕ್ತದಾನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರಕ್ತದಾನ ಪುಣ್ಯದ ಕಾರ್ಯವಾಗಿದೆ. ಆದ್ದರಿಂದ ರಕ್ತದಾನ ಮಾಡಲು ಎಲ್ಲರೂ ಮುಂದಾಗಬೇಕು. ಒಬ್ಬರು ನೀಡಿದ ರಕ್ತದಿಂದ ಕನಿಷ್ಠ ಮೂರು ಜನರ ಜೀವವನ್ನು ಉಳಿಸುವ ಸಾಧ್ಯತೆಯಿದೆ. ರಕ್ತ ದಾನ ಮಾಡುವುದರಿಂದ ಯಾವುದೇ ಸಮಸ್ಯೆಗಳು ದಾನಿಗೆ ಉಂಟಾಗುವುದಿಲ್ಲ. ಅದರ ಬದಲಾಗಿ ರಕ್ತದಾನಿಯ ಆರೋಗ್ಯ ವೃದ್ಧಿಸುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿ, ಈ ಹಿಂದೆ ಅನ್ನದಾನ ಶ್ರೇಷ್ಠ ಎಂದು ಪರಿಗಣಿಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ಎಂದು ಹೇಳಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿರುವ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಹೆಮ್ಮೆಯ ಭಾವದ ಜೊತೆಗೆ ದಾನಿಯ ಆರೋಗ್ಯ ಸುಧಾರಣೆಗೆ ರಕ್ತದಾನ ಸಹಕಾರಿಯಾಗುವುದು ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಸಂಶೋಧನೆಗಳಿಗೆ ತನ್ನದೆ ಆದ ಇತಿಮಿತಿಗಳಿವೆ. ಹಾಗಾಗೀ ರಕ್ತ ಸೇರಿದಂತೆ ಮರಣದ ನಂತರ ನೇತ್ರ ಮತ್ತು ಉಳಿದ ಅಂಗಾಂಗಗಳ ದಾನಕ್ಕೂ ಕೂಡಾ ಮುಂದಾಗಬೇಕು. ಅಕಾಲಿಕ ನಿಧನ ಹೊಂದಿದ ಪುನೀತ ರಾಜಕುಮಾರ ಅವರ ನೇತ್ರದಾನದ ಫಲವಾಗಿ ನಾಲ್ಕು ಅಂಧರಿಗೆ ದೃಷ್ಟಿ ಲಭಿಸಿದೆ. ಪುನೀತ ಅವರ ಈ ಕಾರ್ಯವು ನಮ್ಮೆಲ್ಲರಿಗೂ ಪ್ರೇರಣೆ ನೀಡಲಿ ಎಂದರು.

ಈ ಸಂದರ್ಭದಲ್ಲಿ ವಿವಿಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 50 ಯೂನಿಟ್ ರಕ್ತ ಸಂಗ್ರಹವಾಯಿತು.

ಮೌಲ್ಯಮಾಪನ ಕುಲಸಚಿವ ಡಾ.ವೀರನಗೌಡ ಪಾಟೀಲ, ಆರ್‍ಸಿಯು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯೋಗಿತಾ ಪೋತದಾರ ಮತ್ತು ಡಾ. ಅಪ್ಪಾಸಾಹೇಬ ಕೋಣೆ, ಪ್ರೊ. ಅಶೋಕ ಡಿಸೋಜಾ, ಡಾ.ಸುಮಂತ ಹಿರೇಮಠ, ಕೆಎಲ್‍ಇ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದಾಧಿಕಾರಿ ಡಾ.ವಿ.ಬಿ. ಮಾನೆ, ಡಾ.ರಮೇಶ ಚವ್ಹಾಣ, ಡಾ. ಜಿ.ಎಸ್. ಪಿಲಿ, ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

ಸುಜಾತಾ ಎಂ ಪ್ರಾರ್ಥಿಸಿದರು. ಮಂಜುಳಾ ಸನದಿ ವಂದಿಸಿದರು. ಲಕ್ಷ್ಮಿ ಗುರಿಕಾರ ನಿರೂಪಿಸಿದರು.