Belagavi News In Kannada | News Belgaum

ಚಂಪಾ ನಿಧನಕ್ಕೆ ಗಣ್ಯರ ಕಂಬನಿ

ಅಥಣಿ : ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ’ ಕನ್ನಡ  ಕಾಳಜಿಯ ಘೋಷವಾಕ್ಯದ ಮೂಲಕ ಹೆಸರುವಾಸಿಯಾದ  ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಕನ್ನಡ ಸಾಹಿತಿ, ಕನ್ನಡ ಪರ ಹೋರಾಟಗಾರ ಪ್ರೊ. ಚಂದ್ರಶೇಖರ್ ಪಾಟೀಲ (ಚಂಪಾ) ಅವರ ನಿಧನಕ್ಕೆ ಕರುನಾಡು ಕಂಬನಿ ಮಿಡಿಯುತ್ತಿದ್ದು, ಅಥಣಿಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚಂಪಾ ಅವರು ಒಬ್ಬ ಕ್ರಾಂತಿಕಾರಿ ಸಾಹಿತಿಯಾಗಿದ್ದರು. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ.  ಗೋಕಾಕ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು. 83 ವರ್ಷ ವಯಸ್ಸಿನ  ಸಾಹಿತಿ ಚಂದ್ರಶೇಖರ ಪಾಟೀಲ್ ಅವರ ನಿಧನದಿಂದ ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಥಣಿಯ ಸಾಹಿತಿಗಳು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಥಣಿಯಲ್ಲಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ,ಮೊಟಗಿಮಠದ ಪ್ರಭು ಚೆನ್ನಬಸವ ಸ್ವಾಮೀಜಿ,  ಶೆಟ್ಟರ್ ಮಠದ ಮರುಳಸಿದ್ಧ ಸ್ವಾಮೀಜಿ,  ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ,ಹಿರಿಯರಾದ  ಅರವಿಂದರಾವ ದೇಶಪಾಂಡೆ, ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಹಿರಿಯ ಸಾಹಿತಿ ಡಾ. ಜೆ ಪಿ ದೊಡಮನಿ, ಸಿ. ಎ ಇಟ್ನಾಳಮಠ, ಎಸ್ ಕೆ ಹೊಳೆಪ್ಪನವರ, ಕನ್ನಡಪರ  ಹೋರಾಟಗಾರ ಅಣ್ಣಾಸಾಬ ತೇಲಸಂಗ,  ಡಾ. ಆರ್. ಎಸ್  ದೊಡ್ಡನಿಂಗಪ್ಪಗೋಳ , ನಾರಾಯಣ ಆನಿಖಿಂಡಿ, ಪ್ರಕಾಶ ಖೋತ ಸೇರಿದಂತೆ ಅನೇಕರ ಸಾಹಿತಿಗಳು  ಚಂಪಾ ಅವರನ್ನು   ನೆನದು ಕಂಬನಿ ಮಿಡಿದಿದ್ದಾರೆ.
 ಚಂಪಾ  ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಅಥಣಿ ಶಿವಯೋಗಿಗಳು  ಕರುಣಿಸಲಿ  ಮತ್ತು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Attachments area