Belagavi News In Kannada | News Belgaum

ಕನಕನಗರದ ಲಕ್ಷ್ಮಿ ದೇವಸ್ಥಾನಕ್ಕೆ ಭೂಮಿಪೂಜೆ

 

 ಅಥಣಿ: ಅಥಣಿ ಪುರಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಇಲ್ಲಿನ ಲಕ್ಷ್ಮಿ ದೇವಸ್ಥಾನದ ಕಟ್ಟಡವನ್ನು  ನಿರ್ಮಿಸುತ್ತೇನೆ. ಈಗಾಗಲೆ  ನೀಲನಕ್ಷೆ ಸಿದ್ಧವಾಗಿದ್ದು,  ಮುಂಬರುವ ದಿನಗಳಲ್ಲಿ  ದೇವಸ್ಥಾನದ ಟ್ರಸ್ಟ್ ಕಮಿಟಿ ಎಲ್ಲಾ ಸದಸ್ಯರ ಮತ್ತು ಭಕ್ತಾದಿಗಳ   ಸಹಕಾರ ಪಡೆಯುವ ಮೂಲಕ ಸುಂದರವಾದ ದೇವಸ್ಥಾನವನ್ನು ನಿರ್ಮಿಸಲಾಗುವುದು ಎಂದು ನೂತನ ಪುರಸಭಾ ಸದಸ್ಯ ರಾವಸಾಬ ಐಹೊಳೆ ಹೇಳಿದರು.
 ಅವರು ಸೋಮವಾರ ಪಟ್ಟಣದ ವಾರ್ಡ್ ನಂ 11 ರ  ಕನಕ ನಗರದಲ್ಲಿರುವ ಶ್ರೀ ಲಕ್ಷ್ಮೀ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ  ಮಾತನಾಡಿದರು. ಅಥಣಿ ಪುರಸಭೆ ಚುನಾವಣೆಯಲ್ಲಿ ವಾರ್ಡ್ ನಂಬರ್ 11 ರಿಂದ ಸ್ಪರ್ಧಿಸಿದ್ದಾಗ ಕನಕ ನಗರದ ನಿವಾಸಿಗಳು ಈ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಪ್ರಮುಖ ಬೇಡಿಕೆ ಇಟ್ಟಿದ್ದರು. ವಾರ್ಡಿನ ಎಲ್ಲ ಮತದಾರರ ಆಶೀರ್ವಾದದಿಂದ ನಾನು ಎಂದು ಪುರಸಭೆ ಸದಸ್ಯನಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸುವದಲ್ಲದೆ  ವಾರ್ಡಿನ ಜನತೆಯ ಮೂಲಭೂತ ಸೌಕರ್ಯಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು ವಾರ್ಡಿನ ಎಲ್ಲ ಮತದಾರ ಬಂಧುಗಳಿಗೆ ಮತ್ತು ದೇವಸ್ಥಾನ ಭಕ್ತಾದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.ನಂತರ ಮಾತನಾಡಿದ  ಮುಖಂಡರಾದ ಅನೀಲ ಸುಣದೋಳಿ ಮಾತನಾಡಿ  ಪುರಸಭೆ ಚುನಾವಣೆಯಲ್ಲಿ ಭರವಸೆ ನೀಡಿದ  ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಕೇವಲ ಹತ್ತು ದಿನಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
 ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನ ಕಮಿಟಿ ಅಧ್ಯಕ್ಷ ಪರಶುರಾಮ ಚುಬಚಿ ವಹಿಸಿ ಮಾತನಾಡಿದರು.
 ಈ ವೇಳೆ ನೂತನ ಪುರಸಭಾ ಸದಸ್ಯೆ ವಿದ್ಯಾ ಐಹೊಳೆ,  ವಿಲಿನರಾಜ ಯಲಮಲ್ಲೆ, ಸೈಯದ್ ಅಮೀನ ಗದ್ಯಾಳ, ವಿನಾಯಕ ದೇಸಾಯಿ, ಆರ್ ಡಿ ದೊಡ್ಡಮನಿ, ಎಸ್ ಬಿ ದೊಡ್ಡಮನಿ,ಎಂ. ಎಲ್ ಈಟಿ, ಬಿ. ಬಿ.ಅವಜಿ , ತುಕಾರಾಂ ಸೂರ್ಯವಂಶಿ, ಅಣ್ಣಾಸಾಹೇಬ ಪಾಟೀಲ, ಮಹಾದೇವ ಮಂಡಿಗೇರಿ, ರಮೇಶ್ ದೊಡ್ಡಮನಿ, ಬಾಹುಸಾಹೇಬ ದೊಡ್ಡಮನಿ, ತುಕಾರಾಮ ಕಾಂಬಳೆ, ರವಿ ಕಾಂಬಳೆ,
 ಇನ್ನಿತರರು ಉಪಸ್ಥಿತರಿದ್ದರು.