Belagavi News In Kannada | News Belgaum

ಮಹಾಪುರುಷರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ :ಸಿದ್ಧೇಶ್ವರ ಮಹಾಸ್ವಾಮೀಜಿಯವರು

ಶೇಡಬಾಳ : ಆಚಾರ್ಯ ಶ್ರೀಗಳ, ಮಹಾತಪಸ್ವಿಗಳ, ಸಾಧು ಸಂತರ, ಮಹಾಪುರುಷರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಪಾವನಗೊಳಿಸಿಕೊಳ್ಳುವುದೆಂದು ವಿಜಯಪೂರ ಜ್ಞಾನಯೋಗಾಶ್ರಮ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರು ಹೇಳಿದರು.
ಅವರು ಸೋಮವಾರ ದಿ. 10 ರಂದು ಶೇಡಬಾಳ ಪಟ್ಟಣದ ಪ.ಪೂ. ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ರಾಷ್ಟ್ರಸಂತ, ಸಿದ್ಧಾಂತ ಚಕ್ರವರ್ತಿ ಪರಮಪೂಜ್ಯ ಶ್ವೇತಪಿಚ್ಚಾಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಪ್ರತಿ ಮನೆ, ಮನಗಳಲ್ಲಿ ಮಹಾಪುರುಷರ, ಮುನಿಗಳ ಜೀವನ ಕುರಿತು ರಚಿಸಲಾಗಿರುವ ಗ್ರಂಥಗಳನ್ನು ಇರಿಸಿಕೊಳ್ಳುವಂತೆ ಹೇಳಿದರು.

ಇದರಿಂದಾಗಿ ಮನೆಯ ಬಾಲಕರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮಿಕ ಮನೋಭಾವನೆ ಬೆಳೆದು ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ. ಯಾವುದೇ ಒಂದು ಊರಿನ ಘನತೆ, ಗೌರವ ಹೆಚ್ಚಾಗಬೇಕಾದರೆ ಆ ಊರಿನಲ್ಲಿ ಜನ್ಮ ತಾಳಿದ ಮಹಾಪುರಷರನ್ನು ಅವಲಂಬಿಸಿದೆ. ಶೇಡಬಾಳ ಗ್ರಾಮದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರು ಜನ್ಮ ತಾಳಿರುವ ಕಾರಣಕ್ಕೆ ಈ ಗ್ರಾಮವು ಇಂದು ದೇಶದಲ್ಲಿಯೇ ಗುರುತಿಸಿಕೊಂಡಿದೆ ಎಂದು ಹೇಳಿದರು.
ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಇಂಚಲಕರಂಜಿಯ ಈಶ್ವರಾನಂದ ಸ್ವಾಮೀಜಿ ಧಾರ್ಮಿಕ ಸಭೆಯನ್ನುದ್ದೇಶಿಸಿ ಪ್ರವಚನ ನೀಡಿದರು.

ಇದೇ ಸಮಯದಲ್ಲಿ ಪ.ಪೂ. ಆಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರ ಪೂರ್ಣಾಕೃತಿಯ ಪುತ್ಥಳಿಯ ಲೋಕಾರ್ಪಣೆ ಹಾಗೂ ಪ.ಪೂ. ಆಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರ ಜೀವನ ಕುರಿತು ಅಧ್ಯಯನ ಕೇಂದ್ರದ ಉದ್ಘಾಟನೆ ಜರುಗಿತು. ಉಗಾರ ಬುದ್ರುಕ ಗ್ರಾಮದ ಡಾ.ರಾಜೇಂದ್ರ ಜಯಪಾಲ ಸಾಂಗಾವೆ ಇವರು ರಚಿಸಿದ ಶೇಡಬಾಳದ ಬಾಲಕ ಸುರೇಂದ್ರ ಆಚಾರ್ಯ ಶ್ರೀ ವಿದ್ಯಾನಂದರು, ಶೇಡಬಾಳದ ಸಪ್ತರತ್ನಗಳು ಎಂಬ ಎರಡು ಪುಸ್ತಕಗಳನ್ನು ಜ್ಞಾನಯೋಗಾಶ್ರಮ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಹಾಗೂ ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಂಗವಾಗಿ ಇಂದು ಮುಂಜಾನೆ 8 ಗಂಟೆಗೆ 108 ಕಳಸಗಳೊಂದಿಗೆ ಪ.ಪೂ. ಆಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ಜರುಗಿತು. ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಲೆಯ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

ಈ ಸಮಯದಲ್ಲಿ ಪ್ರಕಾಶ ನಾಂದ್ರೆ, ನೇಮಿನಾಥ ನರಸಗೌಡರ, ಮಹಾವೀರ ಸಾಬಣ್ಣವರ, ಮಹಾವೀರ ನಾಂದ್ರೆ, ಭರತೇಶ ನಾಂದ್ರೆ, ವಿನೋದ ಬರಗಾಲೆ, ಶಾಂತಿನಾಥ ಮುಕುಂದ, ಅಭಯ ನರಸಗೌಡರ, ರಾಜು ನಾಂದ್ರೆ, ಡಾ. ರಾಜೇಂದ್ರ ಸಾಂಗಾವೆ, ಪ್ರದೀಪ ಪಾಟೀಲ, ಅಜೀತ ನಾಂದ್ರೆ, ಕುಮಾರ ಅಲಗೌಡರ, ನಾರಾಯಣ ಬಡಿಗೇರ, ನಿರಂಜನ ನರಸಗೌಡರ ಸೇರಿದಂತೆ ಅನೇಕರು ಇದ್ದರು.