Belagavi News In Kannada | News Belgaum

ಕೃಷಿ ಸಚಿವರ ಕಾರು ಬೆಂಗಾವಲು ವಾಹನಕ್ಕೆ ಡಿಕ್ಕಿ

ಸಂಸದರಿಗೆ ಕೈ, ಕಾಲಿಗೆ ಗಾಯ

ಕಲಬುರಗಿ : ಕೃಷಿ ಸಚಿವ ಬಿ.ಸಿ ಪಾಟೀಲ ಅವರಿದ್ದ ಕಾರು ಎದುರಿನ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಚಿವರೊಂದಿಗೆ ಪ್ರಯಾಣಿಸುತ್ತಿದ್ದ ಸಂಸದ ಡಾ.ಉಮೇಶ್‌ ಜಾಧವ ಅವರಿಗೆ ಕೈ ಹಾಗೂ ಕಾಲಿಗೆ ಗಾಯವಾಗಿದೆ.

ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ವಿಸ್ತರಣಾ ಘಟಕದ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರೊಂದಿಗೇ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಸಚಿವರು ತಂದಿದ್ದ ಹೆಲಿಕಾಪ್ಟರ್ ಆದಷ್ಟು ಬೇಗ ಟೇಕಾಫ್‌ ಆಗಬೇಕಿದ್ದುದರಿಂದ ಕಾರು ವೇಗವಾಗಿ ಹೊರಟಿತ್ತು.

ರೋಡ್‌ ಬ್ರೇಕ್‌ ಬಂದಿದ್ದರಿಂದ ಬೆಂಗಾವಲು ಪಡೆಯ ವಾಹನ ನಿಧಾನಗೊಂಡಿತು. ಸಚಿವರಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯಿತು. ಮಧ್ಯದ ಸೀಟಿನಲ್ಲಿ ಕುಳಿತಿದ್ದ ಸಂಸದರು ಚಾಲಕನ ಬಳಿ ಚಲಿಸಿದರು. ಹೀಗಾಗಿ ಕೈಗೆ ಗಾಯವಾಯಿತು.

ತಕ್ಷಣ ಆಸ್ಪತ್ರೆಗೆ ತೆರಳಿದ ಸಂಸದರಿಗೆ ವೈದ್ಯರು ಚಿಕಿತ್ಸೆ ನೀಡಿದರು. ಸ್ಕ್ಯಾನಿಂಗ್‌ ಮಾಡಿಸಿದಾಗ ಕೈಗೆ ಫ್ರ್ಯಾಕ್ಚರ್ ಆಗಿರುವುದು ಕಂಡು ಬಂದಿದೆ. ಸಂಸದ ಡಾ. ಜಾಧವ  ಅವರಿಗೆ ಈ ಹಿಂದೆಯೂ ಅದೇ ಕೈಗೆ ಎಟು ಬಿದ್ದಿತ್ತು ಎಂದು ತಿಳಿಸಿದ್ದಾರೆ./////