Belagavi News In Kannada | News Belgaum

ಚಂಪಾ ನಂಜಿಲ್ಲದ ಸಾಹಿತಿಯಾಗಿದ್ದರು…

ಬೆಳಗಾವಿ: ತುರ್ತು ಪರಿಸ್ಥಿತಿಯಲ್ಲಿ ಸರಕಾರವನ್ನು ವಿರೋಧಿಸಿ ಸೆರೆಮನೆಗೆ ಒಳಗಾದವರಲ್ಲಿ ಏಕೈಕ ಬರಹಗಾರರೆಂದರೆ ಚಂಪಾ ಅವರು. ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತಿದ್ದ ಅವರು ತಮ್ಮ ಬರಹದಲ್ಲಿ ವ್ಯಂಗ್ಯ ನುಡಿಗಳ ಮೂಲಕ ಖಂಡಿಸುತ್ತಿದ್ದರು. ಇದರಿಂದ ಬಂಡಾಯಕ್ಕೆ ಸಹಜವಾದ ಬುನಾದಿ ಪ್ರಾಪ್ತವಾಯಿತು.  ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಟ್ಟುಕೊಳ್ಳುತ್ತಿದ್ದರೇ ಹೊರತು ವೈಯಕ್ತಿಕ ದ್ವೇಷ ಸಾಧಿಸುತ್ತಿರಲಿಲ್ಲ. ಚಂಪಾ ತಮ್ಮನ್ನು ಎದುರಾಡಿದ ಎಲ್ಲರನ್ನೂ ಪ್ರೀತಿಸುವ ನಂಜಿಲ್ಲದ ಸಾಹಿತಿಯಾಗಿದ್ದರು ಎಂದು ಬಂಡಾಯ ಕವಿ ಡಾ ಸರಜೂ ಕಾಟ್ಕರ್ ಹೇಳಿದರು.

ಅವರಿಂದು ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಕಾಂತ ಪೋಕಳೆ ಅವರು ಮಾತನಾಡಿ ಚಂಪಾ ಅವರ ಕೊಡುಗೆಯನ್ನು ವ್ಯಾಖ್ಯಾನಿಸುವುದು ಕಷ್ಟವಾದರೂ ಸಾಹಿತ್ಯದ ಮೂಲಕ ಸಮಕಾಲೀನ ವಿದ್ಯಮಾನಕ್ಕೆ ಅವರು ಚೇಳಾಗಿ ಕುಟುಕುವ ವಿಮರ್ಶಕರಾಗಿದ್ದರು. ಬರಹ ಮತ್ತು ಚಳವಳಿಗಳೆರಡರಲ್ಲೂ ತೊಡಗಿಸಿಕೊಂಡು ಬದ್ಧತೆಯಿಂದ ಬದುಕಿದ ಅವರ ಚಳುವಳಿ ಮತ್ತು ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡಿ ಅವರ ಕೊಡುಗೆಯನ್ನು ಗ್ರಂಥರೂಪದಲ್ಲಿ ಪ್ರಕಟಿಸಬೇಕು ಎಂದರು.

ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಸಾಹಿತಿಗಳಾದವರು ಬರಹ ಮತ್ತು ಬದುಕಿನಲ್ಲಿ ಅಂತರವಿರದಂತೆ ಸಾಮಾಜಕ್ಕೆ ಬದ್ಧರಾಗಿ ಬರೆಯಬೇಕು ಎಂಬ ಬಂಡಾಯದ ಆಶಯದಂತೆ ಬದುಕಿದವರು ಚಂಪಾ ಅವರು. ಅವರ ವಿಶಿಷ್ಟ ಕೊಡುಗೆಯೆಂದರೆ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದಾಗಿನಿಂದ ನಾಲ್ಕು ದಶಕಗಳವರೆಗಿನ ಬಂಡಾಯ ಸಾಹಿತ್ಯದ ಸಕಲ ಚಟುವಟಿಕೆಗಳನ್ನೂ ಸಂಕ್ರಮಣದ ಮೂಲಕ ದಾಖಲಿಸಿ ಕಟ್ಟಿಕೊಟ್ಟಿರುವುದು ಮತ್ತು ಅನೇಕ ಯುವ ಬರಹಗಾರರಿಗೆ ಸಂಕ್ರಮಣದ ಮೂಲಕ ವೇದಿಕೆ ಕಲ್ಪಿಸಿರುವುದು ಎಂದು ನುಡಿನಮನ ಸಲ್ಲಿಸಿದರು. ಕವಿ ನದೀಮ್ ಸನದಿ, ಸಂಘಟಕ ಶಂಕರ ಬಾಗೇವಾಡಿ, ನೀಲಕಂಠ ಭೂಮಣ್ಣವರ, ಆನಂದ ಬೆಳಗಾವಿ ಮತ್ತಿತರರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಗಜಾನನ ಸಂಗೋಟೆ, ಶಂಕರ ಕರಿಭೀಮಗೋಳ, ಪ್ರಕಾಶ ಕುರಕುಂದ, ಗಣಪತಿ ದೇಗಾನಟ್ಟಿ, ಮಲಿಕಜಾನ ಗದಗಿನ, ಪ್ರಕಾಶ ಭೂಮಣ್ಣವರ ಇತರರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಘಟನೆಯ ಬಾಲಕೃಷ್ಣ ನಾಯಕ ಮತ್ತು ಜೀವನ ಮಾಂಜ್ರೇಕರ ಹೋರಾಟದ ಗೀತೆ ಹಾಡಿದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ವಂದಿಸಿದರು. ಡಾ. ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು./////