Belagavi News In Kannada | News Belgaum

ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನಿಡೀದ ಸಂಸದೆ ಮಂಗಳ ಅಂಗಡಿ

ಬೆಳಗಾವಿ:  ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸೂರ್ಯ ನಮಸ್ಕಾರ ನೆರವಾಗುತ್ತದೆ. ಪುರಾತನ ಭಾರತೀಯ ವ್ಯಾಯಾಮ ಇದಾಗಿದ್ದು, ಎಲ್ಲರೂ ದಿನ ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು ಎಂದು ಸಂಸದೆ ಮಂಗಳ ಅಂಗಡಿ ತಿಳಿಸಿದರು.

ನಗರದ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಶುಕ್ರವಾರ (ಜ.14) ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೂರ್ಯ ನಮಸ್ಕಾರ ಮಾಡುವುದರಿಂದ  ಆರೋಗ್ಯ ವೃದ್ಧಿ ಹಾಗೂ ಮನೋಬಲ ಹೆಚ್ಚಿಸುವುದಷ್ಟೆ ಅಲ್ಲದೆ, ಆರೋಗ್ಯ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ. ರೋಗ ಪ್ರತಿರೋದಕ ಶಕ್ತಿ, ಸಾಮರ್ಥ್ಯ ಮತ್ತು ಜೀವನಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರವು ಎಲ್ಲಾ ವಯೋಮಾನದವರಿಗೂ ಅನ್ವಯವಾಗುವ ಸಾಂಪ್ರದಾಯಕ ವ್ಯಾಯಾಮವಾಗಿದ್ದು, ಎಲ್ಲರೂ ದಿನನಿತ್ಯ ಸೂರ್ಯ ನಮಸ್ಕಾರ ಮಾಡುವುದು ರೂಢಿಸಿಕೊಳ್ಳಬೇಕು ಎಂದು ಸಂಸದೆ ಅಂಗಡಿ ತಿಳಿಸಿದರು.

ಈ  ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಶ್ರೀಕಾಂತ ಸುಣಧೋಳಿ, ಸೂರ್ಯ ನಮಸ್ಕಾರ ಮಾಡಿದರೆ ರಕ್ತ ಸಂಚಾರ ಸರಾಗವಾಗಿ ಸಾಗಲು ಸಹಕಾರಿಯಾಗುವುದು. ಕೀಲು ನೋವು ತಡೆಗಟ್ಟುವುದರ ಜೊತೆಗೆ ಅಜೀರ್ಣ ಸಮಸ್ಯೆಗಳು ಕಂಡು ಬರುವುದಿಲ್ಲ.

ದೇಹದ ನರಗಳು ಮತ್ತು ಮೆದುಳು ಚುರುಕಾಗುವುದು ಹಾಗೂ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಲಿದೆ. ಆದ್ದರಿಂದ ಎಲ್ಲ ವಯೋಮಾನದವರು ಸೂರ್ಯ ನಮಸ್ಕಾರ ದಿನನಿತ್ಯ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ಆಯುಷ್ ಅಧಿಕಾರಿ ಸುಣಧೋಳಿ ಅವರು ತಿಳಿಸಿದರು.

ಜಾಗೃತಿ ಮೂಡಿಸುವ ಬೀದಿ ನಾಟಕಗಳಿಗೆ ಚಾಲನೆ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳಾದ ಬೀದಿ ನಾಟಕ, ಬಯಲಾಟ ಕಲಾ ಪ್ರದರ್ಶನಗಳಿಗೆ ಸಂಸದೆ ಮಂಗಳಾ ಅಂಗಡಿ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಆಯುಷ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು./////