Belagavi News In Kannada | News Belgaum

ದಿಲ್ ಕಿ ಬಾತ್

ದಿಲ್ ಕಿ ಬಾತ್

“ಹೊಣೆಗಾರಿಕೆಯಿರಲಿ,ಹೊಣೆಗೇಡಿತನ ಬೇಡಾ”

ಬರೀ ಬುದ್ಧಿ ಮಾತು ಹೇಳುತ್ತಾ ಅವರಿವರ ಬಗ್ಗೆ ಮಾತಾಡುತ್ತಲೇ ಅಡ್ಡಾಡುವ ನಾವುಗಳು ನಮ್ಮ ಹೊಣೆಗಾರಿಕೆಯ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೇವಾ ಅನ್ನೋದು ಬಹುದೊಡ್ಡ ಪ್ರಶ್ನೆ, ಎಲ್ಲರೂ ಹೇಳುವ ಮಾತೊಂದೇ ಕಾಲ ಕೆಟ್ಟೋಯ್ತು ನಾವು ಹೀಗೆ ಇರಲಿಲ್ಲ ನಮ್ಮಂತೆ ಮಾಡಲು ಇವರಿಂದ ಅಸಾಧ್ಯ ಮಾರಾಯ….!!!

ಕಾಲ ಎಲ್ಲಿ ಕೆಟ್ಟೋಗಿದೆ ನೀವೇನು ಮಾಡಿದಿರಿ, ಮಾಡಿದ ಕೆಲಸಗಳಾದರು ಏನು ಅವು ಸಮಾಜಕ್ಕೆ ಮಾರಕವೋ ಪೂರಕವೋ ಅದರ ಬಗ್ಗೆ ಗುರುತುಗಳಿಲ್ಲದೆ ಹಾಗೆ ಸುಮ್ಮನೆ ಗೋಣಗುತ್ತಲೆಯಿರುವಿಕೆ ಇದು ಹೊಣೆಗೇಡಿತನ, ನಮ್ಮ ನಮ್ಮ ಹೊಣೆಗಾರಿಕೆಯನ್ನ ನಾವು ಮಾಡುವ ಕಾರ್ಯದಲ್ಲಿ ನಿಷ್ಠೆಯಿಂದ ಈ ಸಮಾಜ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದೆ ಆದಲ್ಲಿ ಯಾರಿಗೂ ನಾವು ಬುದ್ದಿವಾದ ಉಪನ್ಯಾಸ ಮಾಡುವ ಅವಶ್ಯಕತೆ ಬೀಳೋದೇಯಿಲ್ಲ….

ಈ ರಾಜಕೀಯ ವಲಯದಲ್ಲೂ ಅಷ್ಟೇ ನಾವೆಲ್ಲಾ ನಿಷ್ಠಾವಂತರು ಈ ಇವಾಗಿನ ಮಕ್ಕಳಿಗೆ ರಾಜಕೀಯ ಅರ್ಥ ಆಗುತ್ತಲೆಯಿಲ್ಲ ತಲೆಲಿ ಮಾಸು ಹಾರಿಲ್ಲ ಅನ್ನೋ ಮಾತುಗಳಿಗಿಂತ, ನಾವೆಷ್ಟು ಸಾಚಾತನದಿಂದ ರಾಜಕೀಯ ಮಾಡಿದ್ದೇವೆ ನಮ್ಮ ಮೇಲಿನ ಆರೋಪಗಳು ಎಷ್ಟಿವೆ ನಾವು ಸಾರ್ವಜನಿಕರ ಹಣ ಎಷ್ಟು ಲಪಟಾಯಿಸಿದ್ದೇವೆ ಅನ್ನೋದನ್ನ ಮರೆತು ಮಾತಾಡುವುದಿದಿಯಲ್ಲ ಇದು ಹೊಣೆಗೇಡಿತನ….

ಹಿರಿಯರಾದವರು ಹಿರಿಯ ಸ್ಥಾನಮಾನಗಳಲ್ಲಿ ಇರುವಂತವರು ಮೊದಲು ತಮ್ಮ ಘನತೆಗೆ ತಕ್ಕುದಾಗಿ ನಡೆದುಕೊಳ್ಳಬೇಕು, ಈ ಮಣ್ಣಿನ ಈ ದೇಶದ ಸಂಸ್ಕೃತಿ ಸಂಸ್ಕಾರವನ್ನ ಮೈಗೂಡಿಸಿಕೊಂಡು ತಾವು ಆಚರಣೆಗೆ ತಂದದ್ದಲ್ಲದೆ ಇನ್ನೊಂದು ಸಂಸ್ಕೃತಿಯನ್ನ ಪ್ರೀತಿಸುವ ಮತ್ತು ಗೌರವಿಸುವ ಗುಣ ಒಂದಿರಬೇಕು,

ನಮ್ಮನ್ನು ನಮ್ಮವರನ್ನು ಎಷ್ಟು ಪ್ರೀತಿಸುತ್ತೇವೋ ಹಾಗೆ ನಮ್ಮ ಧರ್ಮವನ್ನ ಮತವನ್ನ ಎಷ್ಟು ಆರಾಧಿಸುತ್ತೇವೋ ಅಷ್ಟೇ ಇನ್ನೊಂದು ಧರ್ಮವನ್ನ ಮತವನ್ನ ಮನುಷ್ಯರನ್ನ ಕೂಡ ಗೌರವಿಸುವ ಮತ್ತು ಆಧಾರಿಸುವ ಮನಸ್ಥಿತಿ ನಮ್ಮದಾಗಿರಬೇಕು. ಇವತ್ತು ದೇಶದಲ್ಲಿ ಏನಾಗುತ್ತಿದೆ, ತಮ್ಮ ರಕ್ತ ಬಸಿದು ಮನೆ ಮಠ ಬಿಟ್ಟು ಕಾಡುಮೇಡು ಅಲೆದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಅದರ ಫಲಶೃತಿಯಿಂದ ಸ್ವತಂತ್ರ ಭಾರತ ನಮ್ಮದಾಗಿದೆ, ಇಲ್ಲಿ ಹಲವಾರು ಜಾತಿ ಮತ ಪಂಥ ಮತಾಂಧತೆಯ ನಡುವೆಯೂ ಏಕತೆಯನ್ನ ಸಾಧಿಸಿದ ಕೀರ್ತಿ ಭಾರತಕ್ಕಿದೆ ಅದರ ನಡುವೆಯೂ ಸಮಾಜದಿಂದ ಹೊರಗಿಟ್ಟರು ಶಿಕ್ಷಣದಿಂದ ದೂರ ಹಿಡಲು ನೋಡಿದರು ಚಲಬಿಡದೆ ಅವಮಾನಗಳನ್ನ ಸಹಿಸಿಕೊಂಡು ಸರ್ವರ ಸ್ವಾತಂತ್ರ್ಯ ಮತ್ತು ಹಕ್ಕು ಬಾಧ್ಯತೆಗಳನ್ನ ಗುರುತಿಸಲು ಈ ದೇಶಕ್ಕೆ ಸಂವಿಧಾನ ರಚನೆ ಮಾಡಿದಂತ ದೇಶಪ್ರೇಮಿಗಳಿಗೆ ಅವಮಾನ ಮಾಡುವಂತ ನಿಮ್ಮ ಹೊಣೆಗೆಡಿತನದ ಉದ್ಧಟತನದ ನಡುವಳಿಕೆಗಳಿಂದ ಮುಂದಿನ ಪೀಳಿಗೆ ಏನನ್ನ ಕಲಿತುಕೊಳ್ಳಬೇಕು ಸ್ವಾಮಿ….?

ಹಾಗಾದರೆ ನೀವು ಈ ಸಮಾಜಕ್ಕೆ ಕೊಡುವ ನ್ಯಾಯವಾದರು ಯಾವುದು…..?

ಸಂದೇಶವಾದರು ಏನು ನಿಮಗೆ ಯಾವ ಹೊಣೆಗಾರಿಕೆಯಿದೆ ಅನ್ನೋದನ್ನ ಮರೆತಂತೆ ಮಾತಾಡುವುದಾದರೆ, ಯುವ ಪೀಳಿಗೆಗೆ ಬುದ್ಧಿ ಹೇಳುವ ನೈತಿಕತೆ ನಿಮಗೆಲ್ಲಿದೆ…..?

ಅದು ಯಾರೇ ಇರಲಿ ಈ ದೇಶದ ನಿವಾಸಿಯಾದ ಮೇಲೆ ಈ ದೇಶದ ಮಣ್ಣಿಗೆ ಮತ್ತು ಇಲ್ಲಿನ ಸಂಸ್ಕೃತಿಗೆ ದೇಶ ಸೇವೆ ಮಾಡಿದ ದೇಶಭಕ್ತರಿಗೆ ಗೌರವ ಕೊಡುವ ಉತ್ತಮ ಗುಣಗಳನ್ನ ಬೆಳೆಸಿಕೊಳ್ಳಬೇಕು,

ಜೊತೆಗೆ ನಮ್ಮ ಜವಾಬ್ದಾರಿಗಳನ್ನ ಮರೆತು ಇನ್ನೊಬ್ಬರಿಗೆ ಜವಾಬ್ದಾರಿ ಬಗ್ಗೆ ಹೇಳಿಕೊಡುವುದು ಅಪರಾಧವೆ,

ಮೊದಲು ನಾವು ಉತ್ತಮ ಕೆಲಸಗಳನ್ನ ಮಾಡಬೇಕು, ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು, ಆಮೇಲೆ ನಮ್ಮ ಪೀಳಿಗೆ ಆ ಮಾರ್ಗದಲ್ಲಿ ಖಂಡಿತ ನಡೆಯುತ್ತಾರೆ, ಒಂದು ವೇಳೆ ತಪ್ಪಿ ನಡೆದಾಗ ಬುದ್ಧಿ ಮಾತು ಹೇಳಿದರೆ ಕೇಳಿಸಿಕೊಳ್ಳುತ್ತಾರೆ, ನಾವೇ ಹೊಣೆಗಾರಿಕೆಯನ್ನ ಮರೆತು ಹೊಣೆಗೆಡಿತನದಿಂದ ನಡೆದುಕೊಂಡರೆ, ನಮ್ಮ ಗೊಡ್ಡು ಆದರ್ಶಗಳನ್ನ ಕೇಳಲು ನವಪೀಳಿಗೆಯವರೆಲ್ಲ ಮೂರ್ಖರಲ್ಲ, ವಿದ್ಯಾವಂತ ಪ್ರಜ್ಞಾವಂತ ಮನಸ್ಥಿತಿಯವರಾಗಿದ್ದಾರೆ ಅನ್ನೋದನ್ನ ಮರೆಯಬಾರದು, ಅದ್ಯಾವುದೇ ಹುದ್ದೆಯಲ್ಲಿರಲಿ ಕಸ ಗೂಡಿಸುವವನಿಂದ ಹಿಡಿದು ಈ ದೇಶವನ್ನ ಮುನ್ನೆಡಿಸುವ ನೇತಾರರವರೆಗೂ ಒಂದೇ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇರುತ್ತದೆ, ಸ್ಥಾನಮಾನಕ್ಕೆ ತಕ್ಕದಾಗಿ ಕರ್ತವ್ಯಗಳಿರುತ್ತವೆ ಅವರವರ ಕರ್ತವ್ಯಕ್ಗಳನ್ನ ನಿಷ್ಠೆಯಿಂದ ನಿಭಾಯಿಸಿದ್ದೆ ಆದಲ್ಲಿ, ಯುವ ಪೀಳಿಗೆ ದಾರಿ ತಪ್ಪದೆ ನಿಮ್ಮ ಬೆಂಬಲಿಸುತ್ತಾರೆ ಜೊತೆಗೆ ನೀವು ಯುವ ಪೀಳಿಗೆಗೆ ಆದರ್ಶಪ್ರಾಯರಾಗ್ತಿರಿ, ಆದರೆ ದುರಂತವೆಂದರೆ ಬೆಳಗಾದರೆ ಸಾಕು ದಿನಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ನೋಡಿದ್ರೆ ಭ್ರಷ್ಟಾಚಾರ ಅತ್ಯಾಚಾರ ಕೊಲೆ ಸುಲಿಗೆ, ದುಡ್ಡಿನ ಆಸೆಗಾಗಿ ಅಧಿಕಾರದ ಆಸೆಗಾಗಿ ಸರ್ಕಾರಗಳನ್ನ ಬೀಳುಸುವಿಕೆ ಏಳುಸುವಿಕೆ, ಇವೆಲ್ಲ ಮಾಡಬೇಕಾದರೆ ಯಾರ ದುಡ್ಡಿನಿಂದ ಮಾಡ್ತಾರೆ ಸಾರ್ವಜನಿಕರ ತೆರಿಗೆ ಹಣದಿಂದ ಮೆರೆಯುತ್ತಾರೆ, ಈ ತರದ ವ್ಯವಸ್ಥೆ ಇದ್ದಾಗ ಯುವ ಪೀಳಿವೆ ಏನನ್ನ ಕಲಿತುಕೊಳ್ಳಬೇಕು….?
ಇದಕ್ಕೆ ಹಿರಿಯರಾದ ತಾವುಗಳೇ ಉತ್ತರ ಹೇಳಬೇಕು.

✒️ *ನಂದುಪೂಜಾರಿ*
ಸಿದ್ದಾಪುರ ಬಿ
ಪ್ರಗತಿಪರರೈತರು, ಅಂಕಣಕಾರರು