Belagavi News In Kannada | News Belgaum

ಗವನಾಳ ಗ್ರಾಮದ ಹಾಲಸಿದ್ದೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನೆ

ಎಲ್ಲ ಸಮಸ್ಯೆ ಮೆಟ್ಟಿ ನಿಲ್ಲುವ ಶಕ್ತಿ ಆಧ್ಯಾತ್ಮಿಕತೆಯಲ್ಲಿ ಅಡಗಿದೆ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಹುಕ್ಕೇರಿ: ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಸ್ವಲ್ಪ ಸಮಯವನ್ನು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಆಧ್ಯಾತ್ಮಿಕತೆಯಲ್ಲಿ ಅಡಗಿದೆ. ಆಧ್ಯಾತ್ಮಿಕ ಸಾಧನೆಯಿಂದ ಸಾಂಸಾರಿಕ ಮತ್ತು ಪಾರಮಾರ್ಥಿಕವಾಗಿ ಬದುಕಿನಲ್ಲಿ ಯಶಸ್ವಿ ಗಳಿಸಲು ಸಾಧ್ಯವಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

 

ತಾಲೂಕಿನ ಗವನಾಳ ಗ್ರಾಮದಲ್ಲಿ ನಡೆದ ಹಾಲಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡದ ವಾಸ್ತು ಶಾಂತಿ, ಮೂರ್ತಿ ಪ್ರತಿಷ್ಠಾಪನಾ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಆಧ್ಯಾತ್ಮಿಕ ತಳಹದಿಯಿಂದಲೇ ಭಾರತ ಸದೃಢ, ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

 

ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ದೇವಸ್ಥಾನಗಳು ಭಾರತ ದೇಶದ ಧಾರ್ಮಿಕ ಹಾಗೂ ಸಾಂಸ್ಕಂತಿಕ ಶೃದ್ಧಾ ಕೇಂದ್ರಗಳು. ಮಾನವನ ಜೀವನದಲ್ಲಿ ಕಲೆ, ಸಾಹಿತ್ಯ, ಸಂಸ್ಕಾರ, ಸಂಸ್ಕಂತಿಗಳನ್ನು ರೂಢಿಸಿಕೊಂಡಾಗ ನಮ್ಮ ಬದುಕಿನ ಸಾರ್ಥಕತೆಗೆ ಭದ್ರವಾದ ಬುನಾದಿ ಆಗುತ್ತದೆ. ಪ್ರಸ್ತುತ ವಾತಾವರಣದಲ್ಲಿ ಮಾನವೀಯ ಮೌಲ್ಯಗಳನ್ನು ಅಳಡಿಸಿಕೊಳ್ಳುವ ಅಗತ್ಯವಿದೆ. ಸಾಂಸ್ಕಂತಿಕ ಚಟುವಟಿಕೆಗಳಿಂದ ಜೀವನಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಅವರು ಹೇಳಿದರು.

 

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕಂತಿಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದೆ. ಮನುಷ್ಯನ ಮನಸ್ಸು ಚಂಚಲ ಸ್ವಭಾವದಾಗಿದ್ದು, ಪ್ರತಿಯೊಬ್ಬರು ಸದ್ಬಾವನಾ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

 

ಯಮಕನಮರಡಿ ಹುಣಸಿಕೊಳ್ಳಮಠದ ಗುರುಸಿದ್ಧ ರಾಚೋಟಿ ಸ್ವಾಮೀಜಿ, ಅಥಣಿಯ ಅಮರೇಶ್ವರ ಸ್ವಾಮೀಜಿ, ಮುಖಂಡರಾದ ಲಕ್ಷ್ಮಣರಾವ ಚಿಂಗಳೆ, ಜಯಪ್ರಕಾಶ ಕರಜಗಿ, ಪಪ್ಪುಗೌಡ ಪಾಟೀಲ, ಪ್ರಕಾಶ ಬಸ್ಸಾಪೂರಿ, ವಿಠ್ಠಲ ಕುರುಬರ, ಸಿದ್ಧಪ್ಪ ಲಾಲುಗೋಳ, ಭರಮಾ ಜಂಗನವರ, ಲಕ್ಷ್ಮಣ ಬನ್ನೆನ್ನವರ, ಸಂಜು ನಾಯಿಕ, ಶ್ರೀನಿವಾಸ ವ್ಯಾಪಾರಿ, ಸಂಜು ಹತ್ತರಗಿ, ಶಂಕರ ಪೂಜೇರಿ, ಕಲ್ಲಪ್ಪ ಬನ್ನೆನ್ನವರ ಮತ್ತಿತರರು ಉಪಸ್ಥಿತರಿದ್ದರು.