Belagavi News In Kannada | News Belgaum

ಹನಿ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಸದುಪಯೋಗ ಪಡೆಸಿಕೊಳ್ಳುವಂತೆ ಮಾಜಿ ಸಚಿವ ಹಾಗೂ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಕರೆ

ಶೇಡಬಾಳ : ಮುಂದೊಂದು ದಿನ ನೀರಿಗಾಗಿ ಹಾಹಾಕಾರ ಎದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಹಣ ನೀಡಿದರು ನೀರು ಸಿಗದಂತಹ ಪರಿಸ್ಥಿತಿ ಎದುರಾಗಬಹುದು. ಕಾರಣ ಮಳೆಗಾಲದಲ್ಲಿ ಹಳ್ಳ ಕೊಳ್ಳಗಳ ಮೂಲಕ ಹರೆದು ನದಿ ಸೇರುವ ಪ್ರತಿ ಹನಿ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಸದುಪಯೋಗ ಪಡೆಸಿಕೊಳ್ಳುವಂತೆ ಮಾಜಿ ಸಚಿವ ಹಾಗೂ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಕರೆ ನೀಡಿದರು.
ಅವರು ಗುರುವಾರ ದಿ. ೧೦ ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಮಂಗಸೂಳಿ ಗ್ರಾಮದ ಕಾರಿಮಠ ಬಾಗದಲ್ಲಿ ಸುಮಾರು ೧.೩೦ ಕೋಟಿ ರೂ ವೆಚ್ಚದಲ್ಲಿ ಬ್ಯಾರೇಜ್ ಕಮ್ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಜೀವ ರಕ್ಷಕವಾಗಿರುವ ನೀರು ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದ್ದು, ರೈತರ ಬದುಕು ನೀರಾವರಿಯನ್ನೆ ಅವಲಂಬಿಸಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ನದಿ ಸೇರುವ ನೀರನ್ನು ಬ್ಯಾರೇಜ್ ಕಮ್ ಬಾಂದಾರ ನಿರ್ಮಿಸಿ ಭೂಮಿಯಲ್ಲಿ ಜಲಪಾತಳಿಯನ್ನು ಹೆಚ್ಚಿಸಿ ನೀರಾವರಿ ಸೌಲಭ್ಯಕ್ಕೆ ಅನುವು ಮಾಡಿ ಕೊಡಲಾಗುವುದೆಂದು ಹೇಳಿದರು.
ಇತ್ತಿಚಿಗೆ ಮಹಾರಾಷ್ಟç ರಾಜ್ಯದೊಂದಿಗೆ ಬೇಸಿಗೆಯಲ್ಲಿ ಕೃಷ್ಣಾ ನದಿಗೆ ೪ ಟಿಎಂಸಿ ನೀರು ಬಿಡುಗಡೆ ಮಾಡಿ ನಿಮಗೆ ಹಣ ನೀಡುತ್ತೇವೆಂದು ಮನವಿ ಮಾಡಿಕೊಂಡೆವು. ಅದಕ್ಕೆ ಅಲ್ಲಿನ ರಾಜ್ಯ ಸರ್ಕಾರ ನಮಗೆ ಹಣ ಬೇಕಾಗಿಲ್ಲ. ನೀರಿನ ಬದಲಾಗಿ ನೀರನ್ನೇ ನೀಡುವಂತೆ ಹೇಳಿರುವುದನ್ನು ಶ್ರೀಮಂತ ಪಾಟೀಲರು ನೆನಪಿಸಿಕೊಂಡು ಹಣಕ್ಕಿಂತ ನೀರಿಗೆ ಬೆಲೆ ಇರುವುದನ್ನು ವಿವರಿಸಿದರು.
ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರತಿ ಹಳ್ಳಕೊಳ್ಳಗಳಿಗೆ ಬ್ಯಾರೇಜ್ ಕಮ್ ಬಾಂದಾರ ನಿರ್ಮಿಸಿ ನೀರು ಸಂಗ್ರಹದ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಉಗಾರ ಖುರ್ದ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಶೇಡಬಾಳ ಹಾಗೂ ಕಲಾಳ ನಡುವೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಪೈಪ್ಲೈನ್ ಕಾಮಗಾರಿಗೆ, ಮಂಗಸೂಳಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸುಮಾರು ೯೩.೬೦ ಲಕ್ಷ ರೂ. ವೆಚ್ಚದಲ್ಲಿ ೮ ಕೋಣೆಗಳ ಕಟ್ಟಡಕ್ಕೆ ಭೂಮಿ ಪೂಜೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲರು ಚಾಲನೆ ನೀಡಿದರು.
ಈ ಸಮಯದಲ್ಲಿ ಮುಖಂಡರಾದ ದಾದಾಗೌಡ ಪಾಟೀಲ, ಅಭಯಸಿಂಗ್ ಪಾಟೀಲ, ಬಾಳಾಸಾಹೇಬ ಪಾಟೀಲ, ಶಿವಾಜಿ ಬಾನೂಸೆ, ಬಾಹುಸಾಬ ಜಾಧವ, ರಾಜು ನಾಯಿಕ, ಶಕೀಲ ಮುಲ್ಲಾ, ರಾಜು ಬಾನೂಸೆ, ನೀರಾವರಿ ಇಲಾಖೆಯ ಅಧಿಕಾರಿ ಬೀಳಗಿ  ಸೇರಿದಂತೆ ಆಯಾ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು.