Belagavi News In Kannada | News Belgaum

ರೈತರು ಬೆಳೆದ ಬೆಳೆಗಳಿಗೆ ಸರಕಾರವು ನಿಗದಿತ ದರವನ್ನು ನಿಗದಿಪಡಿಸಬೇಕು ಪ್ರೇಮಾತಾಯಿ ರೆಡ್ಡಿಯವರು ಅಭಿಪ್ರಾಯ

ಶೇಡಬಾಳ : ರೈತರು ಬೆಳೆದ ಬೆಳೆಗಳಿಗೆ ಸರಕಾರವು ನಿಗದಿತ ದರವನ್ನು ನಿಗದಿಪಡಿಸಬೇಕು. ಹೀಗಾದಾಗ ಮಾತ್ರ ರೈತರು ಸ್ವಾವಲಂಬನೆಯಿಂದ ಬದುಕಲು ಸಾಧ್ಯ ಎಂದು ಐನಾಪೂರದ ಮಹಿಳಾ ಪ್ರಗತಿಪರ ರೈತರಾದ ಶ್ರೀಮತಿ. ಪ್ರೇಮಾತಾಯಿ ರೆಡ್ಡಿಯವರು ಅಭಿಪ್ರಾಯಪಟ್ಟರು.

ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಸಹಯೋಗದಲ್ಲಿ `ರೈತರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು’ ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ. ಇದು ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಕೃಷಿಯನ್ನು ಪ್ರೋತ್ಸಾಹಿಸುವ ಹಾಗೂ ಅಭಿವೃದ್ಧಿ ಪಡಿಸುವ ಕೆಲಸ ಇನ್ನೂ ಸಮರ್ಪಕವಾಗಿಲ್ಲ. ಟಾಟಾ ಬಿರ್ಲಾಗಳು ಸಂಪತ್ತಿನಲ್ಲಿ ಹೆಚ್ಚಾಗಿರಬಹುದು ಆದರೆ ಹಸಿವಾದಾಗ ಅವರು ಸಂಪತ್ತನ್ನು ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಅನ್ನ ಕೊಡುವ ಅನ್ನದಾತನ ಬೆನ್ನೆಲುಬಾಗಿ ನಾವೆಲ್ಲರೂ ನಿಲ್ಲಬೇಕು. ಕೃಷಿ ಇಲಾಖೆಯು ಮಾಡುವಂತಹ ಕಾರ್ಯವನ್ನು ಸ್ಥಳೀಯ ಶಿವಾನಂದ ಮಹಾವಿದ್ಯಾಲಯವು ಆಯೋಜಿಸಿರುವುದು ಪ್ರಶಂಸನೀಯವಾಗಿದೆ ಎಂದರು.

 

ಸಾವಯವ ಕೃಷಿ ಪದ್ಧತಿ ಕುರಿತು ಮಾತನಾಡಿದ ಬೇಡಕಿಹಾಳದ ಕೃಷಿ ತಜ್ಞರಾದ ಸುರೇಶ ದೇಸಾಯಿಯವರು ಸಾವಿಲ್ಲದ ಕೃಷಿ ಅದುವೇ ಸಾವಯವ ಕೃಷಿಯಾಗಿದೆ. ಶರೀರವು ಹೇಗೆ ಪಂಚಭೂತಗಳಿಂದ ನಿರ್ಮಾಣಗೊಂಡಿದಿಯೋ ಹಾಗೆಯೇ ವೈಜ್ಞಾನಿಕವಾಗಿ ಕೃಷಿ ತನ್ನಗತಿಯನ್ನು ಪಡೆದುಕೊಂಡಿದೆ. ಪ್ರಾಯೋಗಿಕ ಕೃಷಿ ಎಂದರೆ ಕೇವಲ ಕಬ್ಬು ಬೆಳೆಯುವುದಲ್ಲ. ಇದರ ಜೊತೆಗೆ ಇನ್ನುಳಿದ ಬೆಳೆಗಳನ್ನು ರೈತರು ಬೆಳೆಯಬೇಕು ಹಾಗೂ ಪ್ರತಿ ಬೆಳೆಯನ್ನು ಅತ್ಯಂತ ಸೂಕ್ಷ್ಮತೆಯಿಂದ ಪರಿಶೀಲಿಸಬೇಕು. ಸಮರ್ಪಕವಾಗಿ ನೀರನ್ನು ಬಳಸುವುದರ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗವನ್ನು ರೈತ ತಾನೇ ಕಂಡು ಕೊಳ್ಳಬೇಕು. ಕೃಷಿಕರು ರಾಸಾಯನಿಕ ವಸ್ತುಗಳ ಬಳಕೆಯನ್ನು ಕಡಿಮೆಮಾಡಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೃಷಿ ಆದಾಯ ವರ್ಧಿಸುವ ಕ್ರಮಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ದತ್ತ ಸಕ್ಕರೆ ಕಾರ್ಖಾನೆ ಶಿರೋಳದ ಮಣ್ಣು ಪರೀಕ್ಷಣಾ ಅಧಿಕಾರಿಗಳಾದ ಶ್ರೀ. ಎ.ಎಸ್.ಪಾಟೀಲರವರು ಬೆಳೆಗಳನ್ನು ಬೆಳೆಸಬೇಕಾದರೆ ಮಣ್ಣಿನಲ್ಲಿರುವ ಘಟಕಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಮಣ್ಣಿನಲ್ಲಿರುವ ಜೀವಾಣುಗಳ ಸಂಖ್ಯೆ ಜಾಸ್ತಿಯಾದರೆ ಮಾತ್ರ ಹೆಚ್ಚು ಇಳುವರಿ ಬರಲು ಸಾಧ್ಯ. ಕೃಷಿಮಾಡಲು ನೀರಿನ ಗುಣಮಟ್ಟವು ಕೂಡಾ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದಕಾರಣ ರೈತರು ಮಣ್ಣಿನ ಮತ್ತು ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿ ಅದರೊಂದಿಗೆ ಸರಿಯಾಗಿ ತಂತ್ರಜ್ಞಾನವನ್ನು ಬಳಸಿದರೆ ಮಾತ್ರ ಅಭಿವೃದ್ದಿಹೊಂದಲು ಸಾಧ್ಯ ಎಂದು ಹೇಳಿದರು.

ರೈತ ಮುಖಂಡ ಶಶಿಕಾಂತ ಜೋಶಿ, ಕಾಗವಾಡದ ಕೃಷಿ ಅಧಿಕಾರಿ ಮಹಾಂತೇಶ ನರಗಟ್ಟಿ, ನಿವೃತ್ತ ಪ್ರಾದ್ಯಾಪಕರಾದ ಪ್ರೊ. ಎಸ್.ಎಸ್.ಬಾಗನೆ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರೊ. ವ್ಹಿ.ಎಸ್.ತುಗಶೆಟ್ಟಿಯವರು ಚಿನ್ನದ ರಥ ಏರಿ ಬರುವ ರಾಜನಿಗಿಂತ ಎತ್ತಿನಗಾಡಿ ಮೇಲೆ ಬರುವ ರೈತನೇ ದೊಡ್ಡವನು ಹಾಗೂ ಕೃಷಿಕನ ಪಾತ್ರ ನಮ್ಮ ಸಮಾಜದಲ್ಲಿ ಅತೀ ಮಹತ್ವದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ. ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‍ನ ಏಕನ್ಯಾಸಧಾರಿಗಳಾದ ಪರಮ ಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವದಿಸಿದರು. ವೇದಿಕೆ ಮೇಲೆ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಪ್ರೊ. ಬಿ.ಎ.ಪಾಟೀಲ, ಐಕ್ಯೂಎಸಿ ಸಂಯೋಜಕರಾದ ಡಾ.ಎಸ್.ಪಿ.ತಳವಾರ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ, ನಿವೃತ್ತ ಪ್ರಾಚಾರ್ಯರಾದ ಡಾ. ಎಸ್.ಓ.ಹಲಸಗಿ, ವಿವಿ ಸಮಿತಿಯ ಚೇರಮನ್‍ರಾದ ಜ್ಯೋತಿಕುಮಾರ ಎಸ್. ಪಾಟೀಲ, ಯುವ ಮುಖಂಡರಾದ ಶ್ರೀ. ಕಾಕಾ ಪಾಟೀಲ ಉಪಸ್ಥಿತರಿದ್ದರು.

ಪ್ರೊ. ಜೆ.ಕೆ.ಪಾಟೀಲ, ಡಾ.ಎ.ಎಂ.ಜಕ್ಕಣ್ಣವರ, ಪ್ರೊ. ವ್ಹಿ.ಬಿ.ಬುರ್ಲೆ, ಪ್ರೊ.(ಶ್ರೀಮತಿ).ಎಸ್.ಡಿ.ಮಗದುಮ್, ಪ್ರೊ. ಎಂ.ಎಸ್.ಮಾಂಜರೆ, ಪ್ರೊ.ಎಸ್.ಎಂ.ಘೋರ್ಪಡೆ, ಪ್ರೊ.(ಮಿಸ್).ಪಿ.ವ್ಹಿ.ಕಿನಂಗೆ ನಿರೂಪಣೆಯೊಂದಿಗೆ ವಿವಿದ ಗೋಷ್ಠಿಗಳನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮದ ಪ್ರಗತಿಪರ 18 ರೈತರಿಗೆ ಸನ್ಮಾನಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಕೃಷಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 120ಕ್ಕೂ ಹೆಚ್ಚು ರೈತರು, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಡಾ.(ಶ್ರೀಮತಿ).ಡಿ.ಡಿ.ನಗರಕರ ಸ್ವಾಗತಿಸಿ ಪರಿಚಯಿಸಿದರು. ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ
ಡಾ.ಎಸ್.ಎ.ಕರ್ಕಿಯವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಿ.ಡಿ.ಧಾಮಣ್ಣವರ ವಂದಿಸಿದರು.