Belagavi News In Kannada | News Belgaum

ತಾಜ್ ಮಹಲ್‌ಗೆ 3 ದಿನಗಳ ಉಚಿತ ಪ್ರವೇಶ

ಲಕ್ನೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಭಾರತದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಭೇಟಿಗೆ 3 ದಿನಗಳ ಉಚಿತ ಪ್ರವೇಶ ಘೋಷಿಸಲಾಗಿದೆ.

ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ. ಈ 3 ದಿನ ತಾಜ್ ಮಹಲ್‌ನಲ್ಲಿ ಷಹಜಹಾನ್‌ನ ಉರ್ಸ್ ಆಚರಿಸಲಾಗುವುದು. ಹೀಗಾಗಿ ಈ 3 ದಿನಗಳಲ್ಲಿ ಪ್ರವಾಸಿಗರು ವಿನಾಯಿತಿ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಪ್ರತಿ ವರ್ಷ ಉರುಸ್ ಆಚರಣೆ ಸಂದರ್ಭದಲ್ಲಿ ಈ ವಿನಾಯಿತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದಂದು ಕೂಡಾ ತಾಜ್ ಮಹಲ್‌ನಲ್ಲಿ ಪ್ರವೇಶ ಉಚಿತವಾಗಿದೆ.
ಫೆ. 27ರಂದು ಷಹಜಹಾನ್‌ನ ಉರುಸ್ ಮೊದಲ ದಿನ. ಅಂದು ಮಧ್ಯಾಹ್ನ 2 ಗಂಟೆಯಿಂದ ಸೂರ್ಯಾಸ್ತದ ವರೆಗೆ ಎಲ್ಲಾ ಪ್ರವಾಸಿಗರಿಗೂ ಉಚಿತ ಪ್ರವೇಶ ಇರಲಿದೆ. ಫೆಬ್ರವರಿ 28 ರಂದು ಹಿಂದಿನ ದಿನದ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಮಾರ್ಚ್ 1 ಉರುಸ್ ಕೊನೆಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಚಿತ ಪ್ರವೇಶ ಇರಲಿದೆ ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ರಾಜ್‌ಕುಮಾರ್ ಪಟೇಲ್ ತಿಳಿಸಿದ್ದಾರೆ.

ಷಹಜಹಾನ್‌ನ 3 ದಿನಗಳ ಉರುಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಇರಲಿದೆ. ಹೀಗಾಗಿ ತಾಜ್ ಮಹಲ್‌ನ ಭದ್ರತಾ ವ್ಯವಸ್ಥೆ ಬಲಪಡಿಸಲಾಗುತ್ತದೆ. ಉಚಿತ ಪ್ರವೇಶ ಪಡೆಯುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.//////