ಲೈಂಗಿಕತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಗಳಾಗಲಿ: ರಾಜಶ್ರೀ

ಬೆಳಗಾವಿ: “ನಮ್ಮ ಸಮಾಜದಲ್ಲಿ ಹಿರಿಯರು ಕಿರಿಯರಿಗೆ ಲೈಂಗಿಕತೆಯ ಅರಿವು ಮೂಡಿಸಲು ಹಿಂದೇಟು ಹಾಕುತ್ತಾರೆ. ಲೈಂಗಿಕತೆಯ ಕುರಿತು ಮಾತಾಡುವುದೇ ಅಪರಾಧ ಎನ್ನುವ ಮಟ್ಟಿಗೆ ನಮ್ಮ ಸಮಾಜವಿದೆ. ಹೀಗಾಗಿ ಸರಿಯಾದ ಮಾಹಿತಿಯ ಕೊರತೆಯಿಂದ ಚಿಕ್ಕ ಚಿಕ್ಕ ಹೆಣ್ಣುಮಕ್ಕಳು ಲೈಂಗಿಕವಾಗಿ ದುರ್ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹದಿ ಹರೆಯದ ಮಕ್ಕಳಿಗೆ ಪ್ರಾಯದಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆ ಕುರಿತು ಜಾಗೃತಿ ಮೂಡಿಸಬೇಕಿದೆ” ಎಂದು ಸಮಾಜ ಸೇವಕಿ ರಾಜಶ್ರೀ ಮುನೋಳಿ ಕರೆ ನೀಡಿದರು
ಸುರೇಶ ಯಾದವ ಫೌಂಡೇಷನ್ ವತಿಯಿಂದ ರಾಮತೀರ್ಥ ನಗರದ ಸರಕಾರಿ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಜರುಗಿದ
‘ಹೆಣ್ಣು ಮಕ್ಕಳ ಋತುಚಕ್ರದ ಕುರಿತು ಜಾಗೃತಿ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಅವರು, “ಮಹಾತ್ಮಾ ಗಾಂಧೀಜಿಯವರು ಶಿಕ್ಷಣದ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡಬೇಕು ಎಂಬ ನಿಲುವು ಹೊಂದಿದ್ದರು. ಹೀಗಾಗಿ ಇಂಥ ಜಾಗೃತಿ ಕಾರ್ಯಕ್ರಮದ ಮೂಲಕ ಮಕ್ಕಳ ಬೆಳವಣಿಗೆ, ಪೋಷಣೆ, ಪ್ರೌಢಾವಸ್ಥೆ, ಋತುಚಕ್ರ ಹಾಗೂ ಸ್ವಚ್ಛತೆಯ ಬಗ್ಗೆ ನಲಿಕಲಿ ಮಾದರಿಯಲ್ಲಿ ತಿಳುವಳಿಕೆ ನೀಡುವ ಕಾರ್ಯ ಎಲ್ಲೆಡೆ ಆಗಬೇಕು” ಎಂದರು.
ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅವರು ಸ್ಯಾನಿಟರಿ ಪ್ಯಾಡಗಳನ್ನು ಮಕ್ಕಳಿಗೆ ವಿತರಿಸಿದರು.ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷೆ ಜ್ಯೋತಿ ಬೆಣ್ಣಿ ಶಾಲೆಯ ಗ್ರಂಥಾಲಯಕ್ಕಾಗಿ ಋತುಚಕ್ರದ ಬಗ್ಗೆ ಮಾಹಿತಿ ಇರುವ “ಮೆನ್ಸಟ್ರುಪೀಡಿಯಾ” ಎಂಬ ಕಾಮಿಕ್ ಪುಸ್ತಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಧ್ಯಾಪಕಿ ಮೆಳವಂಕಿ, ಎಸ್. ಡಿ. ಎಂ. ಸಿ. ಉಪಾಧ್ಯಕ್ಷ ಲಕ್ಕುರಾಜ ಹೋದ್ಲುರ, ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್̧ ಮನೋಹರ ಸಂಕೇಶ್ವರಿ ಹಾಗೂ ಶಾಲೆಯ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು//////