Belagavi News In Kannada | News Belgaum

ಫುಡ್ ಡೆಲಿವರಿ ಬಾಯ್ ಕಿಡ್ನಾಪ್: 6 ಮಂದಿ ಬಂಧನ

ಜೈಪುರ: ಸೇಡು ತೀರಿಸಿಕೊಳ್ಳುವ ಸಲುವಾಗಿ ಫುಡ್ ಡೆಲಿವರಿ ಬಾಯ್‍ನನ್ನು ಅಪಹರಣ ಮಾಡಿದ್ದ ಆರು ಮಂದಿಯನ್ನು ರಾಜಸ್ಥಾನದ ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ರಾಜಸ್ಥಾನದ ಅಲ್ವಾರ್ ಮೂಲದ ಲೋಕೇಶ್, ದೌಸಾ ಜಿಲ್ಲೆಯ ಸುಮನ್ ಕುಮಾರ್ ಯೋಗಿ, ಛೋಟು, ದೇವಿ ರಾಮ್, ರಿಂಕು ಮತ್ತು ಧರ್ಮೇಂದ್ರ ಎಂದು ಗುರುತಿಸಲಾಗಿದೆ.
ಉಮರ್‍ಪುರ ನಂಗ್ಲಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಿಂಟು ಲಾಲ್ ಮೀನಾ ಅವರ ಮೇಲೆ ಹಣದ ವಿಚಾರವಾಗಿ ಶನಿವಾರ ಮಧ್ಯಾಹ್ನ ಕೆಲವು ಮಂದಿ ಹಲ್ಲೆ ನಡೆಸಿದ್ದರು. ನಂತರ ಭಾನುವಾರ ಮುಂಜಾನೆ ಮುಖಕ್ಕೆ ಮುಸುಕು ಹಾಕಿಕೊಂಡು ಬಂದ ಕೆಲವರು ಮತ್ತೆ ಪಿಂಟು ಲಾಲ್ ಮೀನಾ ಮೇಲೆ ಹಲ್ಲೆ ನಡೆಸಿ ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ರಾಜಸ್ಥಾನದ ಮಂದಾವರ್ ಪ್ರದೇಶಕ್ಕೆ ತಲುಪಿ ಪಿಂಟು ಲಾಲ್ ಅವರನ್ನು ರಕ್ಷಿಸಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಆರೋಪಿಗಳ ಬಳಿ ಇದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರಂಭದಲ್ಲಿ ಆರೋಪಿಗಳು ಪಿಂಟು ಲಾಲ್ ಮೀನಾ ಅವರನ್ನು ಕಿಡ್ನಾಪ್ ಮಾಡಿ ಸೋಹ್ನಾ ತಲುಪಲು ಮೂರು ಬೈಕ್‍ಗಳನ್ನು ಬಳಸಿದ್ದರು. ಆದರೆ ನಂತರ ಕಾರಿನ ವ್ಯವಸ್ಥೆಗೊಳಿಸಿ ರಾಜಸ್ಥಾನಕ್ಕೆ ಕರೆದೊಯ್ದಿದ್ದರು. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ./////