Belagavi News In Kannada | News Belgaum

ಪ್ರತಿಷ್ಠಿತ “ವನಕಲ್ಲು ಶ್ರೀ” ಪ್ರಶಸ್ತಿಗೆ ಭಾಜನರಾದ ವಿಶ್ವೇಶ್ವರ ಭಟ್ ರವರು

*ಪ್ರತಿಷ್ಠಿತ “ವನಕಲ್ಲು ಶ್ರೀ” ಪ್ರಶಸ್ತಿಗೆ ಭಾಜನರಾದ ವಿಶ್ವೇಶ್ವರ ಭಟ್ ರವರು*

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ವತಿಯಿಂದ, ನಾಡಿನ ಸಾಹಿತ್ಯ, ಸಾಂಸ್ಕೃತಿಕ,ವೈಚಾರಿಕ, ಪತ್ರಿಕೋದ್ಯಮ ಹಾಗೂ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ, 2022ನೇ ಸಾಲಿನ ” ವನಕಲ್ಲು ಶ್ರೀ” ಪ್ರತಿಷ್ಠಿತ ಪ್ರಶಸ್ತಿಗೆ, ಖ್ಯಾತ ಲೇಖಕರು ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ರವರನ್ನು ಆಯ್ಕೆ ಮಾಡಲಾಗಿದೆ.

ವಿಶಿಷ್ಟ ರೀತಿಯ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ದೃಢ ಹೆಜ್ಜೆಗುರುತುಗಳನ್ನು ಮೂಡಿಸಿರುವ, ನಾನಾ ಆಯಾಮದ ವರದಿ, ಲೇಖನಗಳ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ, ವಿಶ್ವವಾಣಿ ಕ್ಲಬ್ ಹೌಸ್ ಮೂಲಕ ಆಧುನಿಕ ಅನುಭವ ಮಂಟಪವನ್ನು ಕಟ್ಟಿರುವ ಹಾಗೂ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ನಾಡಿನಾದ್ಯಂತ ಸಂಚಲನ ಸೃಷ್ಟಿಸಿರುವ ಶ್ರೀಯುತ ವಿಶ್ವೇಶ್ವರ ಭಟ್ ರವರನ್ನು ಐವರು ಸದಸ್ಯರ ಸಮಿತಿ ಸರ್ವಾನುಮತದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಅಂತರ್ರಾಷ್ಟ್ರೀಯ ಬಸವ ತತ್ವ ಪ್ರಚಾರಕರು, ಶೂನ್ಯಪೀಠದ ಅಧ್ಯಕ್ಷರೂ ಆಗಿರುವ, ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಬಸವರಮಾನಂದ ಮಹಾಸ್ವಾಮಿಗಳು, ಲೇಖಕ ಹಾಗೂ ಪತ್ರಕರ್ತರಾದ ಶ್ರೀ ಮಣ್ಣೆ ಮೋಹನ್ ರವರು , ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎಂ ಚನ್ನಪ್ಪನವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಟಿ ಗಂಗಯ್ಯ ನವರ ನೇತೃತ್ವದ ಪಂಚ ಸದಸ್ಯರ ಸಮಿತಿಯು ಸರ್ವಾನುಮತದಿಂದ ಆಯ್ಕೆ ಯನ್ನು ಪ್ರಕಟಿಸಿದೆ.

ಹಾಗೆಯೇ 2022ನೇ ಸಾಲಿನ “ಜಗಜ್ಯೋತಿ ಪ್ರಶಸ್ತಿ”ಯನ್ನು ಹೊಸದುರ್ಗ ಭಗೀರಥಿ ಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳಿಗೆ,
“ವಿಶ್ವಜ್ಯೋತಿ ಪ್ರಶಸ್ತಿ”ಯನ್ನು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರಿಗೆ ಮತ್ತು “ಶ್ರೀ ಬಾಲಗಂಗಾಧರನಾಥ ನಿರ್ಮಲ ಜ್ಯೋತಿ” ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅಭಿನಯ ಅವರಿಗೆ ನೀಡಲಾಗಿದೆ.

ದಿನಾಂಕ 13/03/2022 ರ ಬೆಳಗ್ಗೆ 10.30ಕ್ಕೆ ಶ್ರೀ ವನಕಲ್ಲು ಮಠದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.ಇದೇ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ,2021 ಸಾಲಿನಲ್ಲಿ “ವನಕಲ್ಲು ಶ್ರೀ” ಪ್ರಶಸ್ತಿಗೆ ಭಾಜನರಾಗಿದ್ದ ವಚನ ಸಾಹಿತ್ಯ ಚಿಂತಕರು ಹಾಗೂ ಸಂಶೋಧಕರಾದ ಡಾ.ಶ್ರೀ ವೀರಣ್ಣ ಬಸಪ್ಪ ರಾಜೂರವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು.

——————————————————-
*”ವನಕಲ್ಲು ಶ್ರೀ” ಪ್ರಶಸ್ತಿ ವಿಜೇತರ ಪಟ್ಟಿ*

2013- ಹುಲಿಕಲ್ ನಟರಾಜ್ (ವೈಚಾರಿಕತೆ)
2014- ಕೆ.ಎಸ್.ನಿಸಾರ್ ಅಹಮದ್ (ಸಾಹಿತ್ಯ)
2015- ಬಿ.ಟಿ.ಲಲಿತ ನಾಯಕ್ (ಮಹಿಳಾ ಸಾಹಿತ್ಯ)
2016- ಸೀತಾರಾಮ್ ಜಿಂದಾಲ್ (ಕೈಗಾರಿಕೋದ್ಯಮಿ) 2017- ಎಚ್.ಡಿ.ದೇವೇಗೌಡ(ರಾಜಕೀಯ)
2018- ಸಂತೋಷ್ ಹೆಗಡೆ (ಕಾನೂನು ಸೇವೆ)
2019- ಸಾಲುಮರದ ತಿಮ್ಮಕ್ಕ(ಪರಿಸರ)
2020- ಕೋವಿಡ್ ಕಾರಣಕ್ಕೆ ಸ್ಥಗಿತ
2021-ಡಾ.ಶ್ರೀ ವೀರಣ್ಣ ಬಸಪ್ಪ ರಾಜೂ(ಸಂಶೋಧನೆ )
2022- ವಿಶ್ವೇಶ್ವರ ಭಟ್(ಸಾಹಿತ್ಯ ಮತ್ತು ಪತ್ರಿಕೋದ್ಯಮ)
————————————————————-

*ವಿಶ್ವೇಶ್ವರ ಭಟ್ ರವರ ಕಿರುಪರಿಚಯ*

ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂಕಿನ ಮೂರೂರಿನವರಾದ ವಿಶ್ವೇಶ್ವರ ಭಟ್ ರವರು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದವರು. ಬಿ.ಎಸ್ಸಿ ಪದವಿಯ ನಂತರ , ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ, ಪತ್ರಿಕೋದ್ಯಮದಲ್ಲಿ ಎಂ.ಎ ಯನ್ನು 4 ಚಿನ್ನದ ಪದಕದೊಂದಿಗೆ ತಮ್ಮದಾಗಿಸಿಕೊಂಡ.ನಂತರ ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ‘ಅಸಿಸ್ಟೆಂಟ್ ಪ್ರೊಫೆಸರ್’ ಆಗಿ, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಾಗಿದ್ದ ಅನಂತ್ ಕುಮಾರ್ ರವರ ವಿಶೇಷ ಕರ್ತವ್ಯಾಧಿಕಾರಿಯಾಗಿ, ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಅವರದಾಗಿದೆ.

ವಿಶ್ವೇಶ್ವರ ಭಟ್ ರವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗಳ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.ಇದೀಗ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. 70ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು/ಅನುವಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳೂ ಇವೆ. ಅಕ್ಷರಗಳೊಂದಿಗೆ ‘ಅಕ್ಕರೆಯ ಯಾನ’, ‘ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ’, ‘ಕಲಾಂ ಕಮಾಲ್’, ‘ಜನಗಳ ಮನ’ ಸರಣಿ, ‘ನೂರೆಂಟು ಮಾತು’ ಸರಣಿ, ‘ಸುದ್ದಿಮನೆ ಕತೆ’ ಸರಣಿ, ‘ಪತ್ರಿಕೋದ್ಯಮ ಪಲ್ಲವಿ’, ‘ಬತ್ತದ ತೆನೆ’, ‘ರಾಷ್ಟ್ರಪತಿ ಜೊತೆ ಹದಿನಾಲ್ಕು ದಿನ’- ಇವು ಅವರ ಕೆಲವು ಕೃತಿಗಳು.

ಅವರು ಸಲ್ಲಿಸಿರುವ ಸೇವೆಗಾಗಿ 2005 ರಲ್ಲಿ ಕರ್ನಾಟಕ ಸರ್ಕಾರದಿಂದ ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು, 2009 ರಲ್ಲಿ ‘ ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕೆ. ಶಾಮರಾವ್ ಪ್ರಶಸ್ತಿ’ ಪಡೆದಿರುವ ಶ್ರೀಯುತರು, ಇದೀಗ 2022 ರ ಸಾಲಿನ ಪ್ರತಿಷ್ಠಿತ ‘ವನಕಲ್ಲು ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

*ಮಣ್ಣೆ ಮೋಹನ್*
(ಆಯ್ಕೆ ಸಮಿತಿ ಪರವಾಗಿ)