ದೇಶವೆಂಬ ಗಡಿಯೊಂದರ ಒಳಗೆ-ಹೊರಗೆ

*ದೇಶವೆಂಬ ಗಡಿಯೊಂದರ ಒಳಗೆ-ಹೊರಗೆ*
ದೇಶ ಯಾವುದಾದರೇನೂ
ದ್ವೇಷದ ಕತ್ತರಿಗೆ ಸಿಲುಕಿ
ಸಾವು ರಕ್ಕಸ ನಗೆಯನ್ನೇ ಬೀರುತ್ತಿದೆ.ಬದುಕಲು ಬಿಡಿ ಸಾಕೆಂಬ ಕೂಗೊಂದೆ
ಆಕಾಶದಗಲ ಅನುರಣಿಸಿದರೂ ಬರೀ ಬಂಕರು,ಹೆಲಿಕಾಪ್ಟರ್ರು, ಬಾಂಬುಗಳ ಸುರಿಸುವ ವಿಮಾನಗಳ ಸದ್ದಷ್ಟೇ ಕೇಳುತ್ತಿದೆಯಂತೆ!!
ಅವರಲ್ಲಿ ಸೂರ್ಯ ಹುಟ್ಟುವ ಸಮಯ ಬದಲಾದರೇನು
ನೆಲಬಾಂಬು,ಸಿಡಿಮದ್ದು ಗುಂಡಿನ ಜೊತೆಗೆ
ಆಕಾಶವೂ ಬೆಂಕಿಯನ್ನೆ ಉಗುಳುತ್ತಿದೆಯಂತೆ.
ಪರಸ್ಪರ ಸಹಬಾಳ್ವೆ ನಡೆಸಬೇಕಾದವರೆ ಈಗ ಒಬ್ಬರಿಗೊಬ್ಬರು ಶತ್ರುಗಳಂತೆ.
ಇನ್ನೊಬ್ಬರ ಸೋಲಿಗಾಗಿಯೇ
ಕಾಯುತ್ತಾರಂತೆ
ವಿಶ್ವದ ಹಿರಿಯನ್ನ ಕಿರಿಯಣ್ಣರ ಮೌನ ಆ ದೇಶದ ಪ್ರಜೆಗಳ ಜೊತೆಗೆ ನಮ್ಮವರೂ ಸಿಲುಕಿದ್ದಾರಂತೆ.
ಶಾಂತಿಗಾಗಿ ನಡೆಸಿದ ಸಂಧಾನಗಳು ಮುರಿದು ಬಿದ್ದಿವೆಯಂತೆ.
ತಪ್ಪು ಮಾಡದ ಅಮಾಯಕರ
ಛಿದ್ರಗೊಂಡ ದೇಹಗಳ
ಮಣ್ಣು ಮಾಡಲು ಯಾರಿಗೂ ಸಮಯ ಸಿಗುತ್ತಿಲ್ಲವಂತೆ.
ಹುತಾತ್ಮರೆನ್ನುವ ಹೆಸರಿನಲ್ಲಿ ಆ ದೇಶಗಳ ಯೋಧರು ತಮ್ಮ ಜೀವಗಳ ಅನಾಮತ್ತು ತೆರುತ್ತಿದ್ದಾರಂತೆ.ಶಾಲೆ,ಕಾಲೇಜು,ಮಂದಿರ,ಮನೆಗಳು ಬೆಂಕಿಯ ಕೆನ್ನಾಲಗೆಗೆ ಭಸ್ಮವಂತೆ
ಉಭಯ ಕುಶಲೋಪರಿಯ ಮಾತುಗಳು ಮುಗಿದುಹೋಗಿವೆಯಷ್ಟೇ ಸದ್ಯ ಬದುಕಿದರೆ ಸಾಕೆಂಬ ಆಸೆ ಮಾತ್ರ ಅನುರಣಿಸುತ್ತಿದೆ.
ಯಾವ ದೇವರೂ ಬರುತ್ತಿಲ್ಲ ರಕ್ಷಣೆಗೆ.ಕೈಗೆ ಸಿಕ್ಕ ಎದುರಾಳಿಯ ಕರುಣೆ ಇಲ್ಲದೆ ಕೊಲ್ಲುವ ನಿರ್ದಯಿ ಮತ್ತೊಬ್ಬ ಮನುಷ್ಯನಂತೆ.
ಗಡಿಗಳಾಚೆಯ ವರದಿಗಳ ಕೇಳಿ ಹೃದಯ ಕಂಪಿಸುತ್ತಿದೆ.
ಕಣ್ಣು ಹನಿಗೂಡುತ್ತಿವೆ.
ಉಳಿದ ಪ್ರಾಣಿಗಳು ಹಸಿದು ಬೇಟೆಯಾಡುತ್ತವೆಯಂತೆ.
ಸ್ವಜಾತಿಯ ಜೀವಗಳ ಮೇಲೆ
ಮನುಷ್ಯನೇಕೆ ಮುರಿದು ಬೀಳುತ್ತಿದ್ದಾನೆ.?
ಇಂದೋ ನಾಳೆಯೋ ಯುದ್ದ ಸಾರಿದ ನಾವು
ಗೆದ್ದೆವೆಂಬ ಅಹಂಕಾರಕ್ಕಿಂತ
ಆದ ನಷ್ಟಗಳ ಸಾವು ನೋವುಗಳ ಲೆಕ್ಕ ಹಾಕಿದರೆ
ಸಾಮ್ರಾಟ ಅಶೋಕ, ಬಾಹುಬಲಿಯ ಜೊತೆಗೆ ಅಲೆಗ್ಸಾಂಡರ್ ಕಥೆಗಳು ಕೂಡ ನೆನಪಾಗುತ್ತವೆ.
ಅಲ್ಲಿ ಬಿದ್ದ ಇಮಾರತ್ತಿನಲ್ಲಿ ಮಗುವೊಂದು ಅಳುವ ಸದ್ದು ಬೂಟುಗಾಲಿನ ಸದ್ದಿನಲ್ಲೇ ಮುಚ್ಚಿ ಹೋಗಿದೆಯಂತೆ.
ಸತ್ತ ಬಾಣಂತಿಯ ಶವದ ಸ್ತನಗಳ ಹಸುಗೂಸೊಂದು
ಮೂರು ದಿನಗಳಿಂದ ಕುಡಿಯುತ್ತಿದೆಯಂತೆ.
ಇದೆಲ್ಲ ರಷ್ಯಾ-ಉಕ್ರೇನುಗಳ ಕಥೆಯಾದರೆ
ನನ್ನ ದೇಶದ ವ್ಯಥೆಯೇ ಬೇರೆ ಇದೆ.ಜನಾಂಗೀಯ ದ್ವೇಷದ ಅಫೀಮು ನುಂಗಿದ ಯುವ ಸಮುದಾಯ ಅಲ್ಲಲ್ಲಿ ಆಗಾಗ ಹಾದಿ ತಪ್ಪುತ್ತಿದೆ.
ಯಾರ ಲಗಾಮಿಗೂ ಸಿಲುಕದ
ಕ್ಷುಧ್ರ ಶಕ್ತಿಗಳು ಎದ್ದು ಮತ್ತೆ ಮತ್ತೆ ಕುಣಿಯುತ್ತಿವೆ
ಕೋಮು ಗಲಭೆಗಳಾದಾಗೆಲ್ಲ ಶಾಂತಿಗಾಗಿ ಪಠ-ಪಠಿಸಿದ ಮಂತ್ರಗಳು ತಮ್ಮ
ತರ್ಕ ಕಳೆದುಕೊಂಡರೆ ಉಭಯ ಬಣಗಳ
ಶಾಂತಿಧೂತರ ಮಾತುಗಳೆಲ್ಲ
ವ್ಯರ್ಥ ವಾಗುತ್ತಿವೆಯಂತೆ.
ಇಲ್ಲಿ ಧರ್ಮದ ಹೆಸರಲ್ಲಿ
ಮುಂದೊಮ್ಮೆ ಯುದ್ಧವಾದರೆ
ಮತ್ತದೆ ರಕ್ತ ಮೆತ್ತಿದ ರಸ್ತೆ, ಸಾವು ನೊವಿನ ಕಥೆಗಳನ್ನೇ ಮುಂದಿನ ಪೀಳಿಗೆಯೊಂದು ಕೇಳಲಿದೆಯಂತೆ.
*ದೀಪಕ ಶಿಂಧೇ*
ಸಿಎಂ ಅವರು ಯಾವುದಕ್ಕೆ ಎಷ್ಟು ಬಜೆಟನ್ನು ನೀಡಿದ್ದಾರೆ ಪೂರ್ತಿಯಾಗಿ ಮಾಹಿತಿ ಇಲ್ಲಿದೆ ನೋಡಿ