ಗುರಿ ಸಾಧನೆಗೆ ಗುರುವಿನ ಆಶೀರ್ವಾದ ಅಗತ್ಯ: ಡಿಸಿ ಹಿರೇಮಠ

ಹುಕ್ಕೇರಿ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯುವರೆಗೂ ಉಳಿಯುವುದಿಲ್ಲ. ಆದರೆ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಪಟ್ಟಣದ ಹೊರವಲಯದ ಎಸ್.ಎಸ್.ಕನ್ವೆನ್ಷನ್ ಹಾಲ್ನಲ್ಲಿ ರವಿವಾರ ಎಸ್.ಕೆ.ಹೈಸ್ಕೂಲ್ನ 1988-89 ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಘದಿಂದ ಏರ್ಪಡಿಸಿದ್ದ ಗುರುವಂದನೆ ಹಾಗೂ ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ಇಂದು ನಾವೆಲ್ಲ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜದ ಕೂಲಿ, ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿರುತ್ತದೆ. ಅವರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಮೂಲಕ ಕಟ್ಟಿದ ತೆರಿಗೆಯ ಹಣದಿಂದಲೇ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಈ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆಸಿದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉದ್ಯೋಗ ಇನ್ನಿತರ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಈ ಕಾರ್ಯಕ್ರಮ ಸ್ಮರಣೀಯ ಎಂದರು.
ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡದ ಹಾಸ್ಯ ಸಂಜೆ ಕೇಳುಗರನ್ನು ನಗೆಗಡಲಲ್ಲಿ ತೇಲಿಸಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪಕುಮಾರ ಕುರಂದವಾಡೆ ಅವರು ಮಧ್ಯವಯಸ್ಸಿನ ಬಿಕ್ಕಟ್ಟುಗಳು ಮತ್ತು ಪರಿಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನಿಧ್ಯ, ಎಸ್.ಕೆ.ಪಬ್ಲಿಕ್ ಶಾಲೆ ಅಧ್ಯಕ್ಷ ಚನ್ನಬಸಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ರಾಜು ಕುರಂದವಾಡೆ, ಸ್ವಾಮಿ ವಿವೇಕಾನಂದ ಶಾಲೆ ಅಧ್ಯಕ್ಷ ಅಶೋಕ ಪಾಟೀಲ, ರಾಜು ಶೆಟ್ಟಿ, ಚಂದು ಮಾಳಗೆ, ನರಸಪ್ಪ ಮೈಲಾಖೆ, ಅನಿಲ ಶೆಟ್ಟರ, ಎಸ್.ಆರ್.ಪಾಟೀಲ, ಬಸು ಹೊನ್ನಿಮನಿ ಮತ್ತಿತರರು ಉಪಸ್ಥಿತರಿದ್ದರು. ಖಾಸಗಿ ಸುದ್ಧಿ ವಾಹಿನಿ ಆ್ಯಂಕರ್ ನಮೀತಾ ಜೈನ್ ನಿರೂಪಿಸಿದರು. ದಿಲೀಪ ಕುರಂದವಾಡೆ ಸ್ವಾಗತಿಸಿದರು.////