Belagavi News In Kannada | News Belgaum

ಶೀಘ್ರವೇ ಮಹಾತ್ಮಾ ಜ್ಯೋತಿಬಾ ಫುಲೆ ಪ್ರತಿಮೆ ನಿರ್ಮಾಣ ಪೂಜೆ: ಕಾಶಿನಾಥ

ಚಿಕ್ಕೋಡಿ: ಪಟ್ಟಣದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ ಸ್ಥಾಪನೆಗೆ ಪುರಸಭೆಯಿಂದ ಸ್ಥಳ ನಿಗಧಿ ಮಾಡಿ ಅದರ ಆದೇಶ ಪ್ರತಿಯನ್ನು ಮಾಳಿ ಸಮಾಜ ಸಂಘಟನೆಗೆ ನೀಡಿದ್ದು, ಶೀಘ್ರದಲ್ಲಿಯೇ ಪ್ರತಿಮೆ ನಿರ್ಮಾಣ ಭೂಮಿ ಪೂಜಾ ನೆರವೇರಿಸಲಾಗುವುದು ಎಂದು ಚಿಕ್ಕೋಡಿ ತಾಲೂಕಾ ಮಾಳಿ ಸಮಾಜ ಸಂಘಟನೆ ಅಧ್ಯಕ್ಷೆ ಕಾಶಿನಾಥ ಮಾಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಿಕ್ಕೋಡಿ ಪಟ್ಟಣದ ಬಸವವೃತ್ತದಲ್ಲಿರುವ ಮಿನಿವಿಧಾನ ಸೌಧದ ಪಕ್ಕದಲ್ಲಿರುವ ನಿವೇಶನವನ್ನು ಪುರಸಭೆ ಮಾಳಿ ಸಮಾಜ ಸಂಘಟನೆಗೆ ಹಸ್ತಾಂತರ ಮಾಡಿರುವುದು ಸ್ವಾಗತಾರ್ಹ. ಶೀಘ್ರದಲ್ಲಿಯೇ ಗಣ್ಯರಿಂದ ಸುಮಾರು 38 ಲಕ್ಷ ರೂ.ಗಳ ವೆಚ್ಚದಲ್ಲಿ 12.5 ಅಡಿಯ ಮಹಾತ್ಮಾ ಜ್ಯೋತಿಭಾ ಫುಲೆ ಮತ್ತು 12 ಅಡಿಯಷ್ಟು ಎತ್ತರದ ಸಾವಿತ್ರಿಬಾಯಿ ಫುಲೆ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಅಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಉತ್ತಮ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಿಂದುಳಿದ ವರ್ಗಗಳ ನಿಗಮದಲ್ಲಿ ಕೆಲವೊಂದು ಜಾತಿಗಳನ್ನು ಸೇರಿಸಿದ್ದು, ಅದರಲ್ಲಿ ಮಾಳಿ ಸಮಾಜವನ್ನು ಸೇರ್ಪಡೆ ಮಾಡಿದ್ದು, ಅದಕ್ಕೆ ಇತ್ತೀಚೆಗೆ ಮಂಡಿಸಿದ ಬಜೇಟ್‍ದಲ್ಲಿ ಆ ನಿಗಮಕ್ಕೆ 400ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿ, ಕರ್ನಾಟಕ ಸೌಹಾರ್ದ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮತ್ತು ಮಾಜಿ ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಮಾರ್ಗದರ್ಶನದಲ್ಲಿ ಮಾಳಿ ಸಮಾಜಕ್ಕೆ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಭಾಯಿ ಫುಲೆ ಅವರ ಪ್ರತಿಮೆ ನಿರ್ಮಾಣಕ್ಕೆ ಪುರಸಭೆಯಿಂದ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಿ ಅದರ ಆದೇಶ ಪ್ರತಿಯನ್ನು ಮಾಳಿ ಸಮಾಜ ಸಂಘಟನೆಗೆ ಹಸ್ತಾಂತರಿಸಲಾಗಿದೆ ಎಂದರು.

ನೆರೆಯ ಮಹಾರಾಷ್ಟ್ರ ಹೊರತು ಪಡಿಸಿದರೇ ಕರ್ನಾಟಕ ರಾಜ್ಯದಲ್ಲಿ ಮಹಾತ್ಮಾಜ್ಯೋತಿಭಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ ಎಲ್ಲಿಯೂ ಇಲ್ಲ. ರಾಜ್ಯದಲ್ಲಿಯೇ ಮೊದಲು ಮಹಾತ್ಮಾಜ್ಯೋತಿಭಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ ಸ್ಥಾಪನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಉಪಾಧ್ಯಕ್ಷ ಅಪ್ಪಾಸಾಹೇಬ ಕೋರೆ, ಕಾರ್ಯದರ್ಶಿ ಸುರೇಶ ಕಾಳಿಂಗೆ, ಕೋಶಾಧ್ಯಕ್ಷ ಮಲ್ಲೇಶ ಲಿಂಬಿಗಿಡದ, ಬಾಬು ಮಿರ್ಜೆ, ಸೋಮನಾಥ ಗವನಾಳೆ, ಲಕ್ಷ್ಮಣ ಮಾಳಿ, ರವಿ ಮಾಳಿ, ಗಿರೀಶ ಕೋಳಿ, ಸಂಜಯ ಮಾಳಿ, ಸದಾಶಿವ ಮಾಳಿ, ಬಸವರಾಜ ಕವಣಿ, ಅನೀಲ ಮಾಳಿ, ರಾವಸಾಹೇಬ ಮಾಳಿ, ಶಿವಲಿಂಗ ಅರಭಾಂವಿ, ಬಾಳಪ್ಪಾ ದೊಡಮನಿ, ರಾಜು ಮಾಳಿ ಮುಂತಾದವರು ಉಪಸ್ಥಿತರಿದ್ದರು.////