Belagavi News In Kannada | News Belgaum

ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಸಿದ ಸಿಪಿಐ ಬಸವರಾಜ ಬೀಸನಕೊಪ್ಪ

ಅಥಣಿ: ತಾಲೂಕಿನ ಕಿರಣಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ 193 ನೇ ಜಯಂತಿ ಅಂಗವಾಗಿ ರಸಪ್ರಶ್ನೆ  ಸ್ಪರ್ದೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ಅವರ ಸಾಮಾನ್ಯ ಜ್ಞಾನವನ್ನು ಓರೆಗೆ ಹಚ್ಚುವ ನಿಟ್ಟಿನಲ್ಲಿ ಸಹಾಯಕವಾಗುವ ಹಾಗೆ ಓ ಎಮ್ ಆರ್ ಮಾದರಿಯ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿದ್ದ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಒಟ್ಟು ಐದು ನಗದು ಬಹುಮಾನ,ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.ಕಿರಣಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ 230 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಥಮ, ದ್ವಿತೀಯ, ತೃತೀಯ ಹೀಗೆ ಐದು ಬಹುಮಾನಗಳನ್ನು ವಿಜೇತರಿಗೆ ವಿತರಿಸಲಾಯಿತು.
ಈ ವೇಳೆ ಉದ್ಘಾಟನೆ ಬಳಿಕ ಮಾತನಾಡಿದ ಸಿಪಿಐ ಬಸವರಾಜ ಬೀಸನಕೊಪ್ಪ ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳು,ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವದರ ಜೊತೆಗೆ ಅನಗತ್ಯ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ತಮ್ಮ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಜನೆ ಮಾಡಿ ಸರ್ಕಾರದ ಉತ್ತಮ ಹುದ್ದೆಗಳಿಗೆ ಆಯ್ಕೆ ಆಗುವ ನಿಟ್ಟಿನಲ್ಲಿ ಸದಾ ಮನಸ್ಸನ್ನು ಏಕಾಗ್ರತೆಗೆ ಒಳಪಡಿಸಬೇಕು.ದೇಶದ ಸಂಸ್ಕೃತಿ,ಪರಂಪರೆಯನ್ನು ಎತ್ತಿ ಹಿಡಿಯುವದರ ಜೊತೆಗೆ ಯಾರಿಗೂ ಕೇಡು ಬಯಸದೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರಲ್ಲದೆ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ ಜಯಕರ್ನಾಟಕ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಹಾಲಿಂಗ ಮೇತ್ರಿ ಮಾತನಾಡಿ ವಿದ್ಯಾರ್ಥಿಗಳು ಸತತವಾದ ಓದು,ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಅಂಕಗಳಿಗೆ ಮಹತ್ವ ನೀಡುವ ಇಂದಿನ ದಿನಗಳಲ್ಲಿ ನಮ್ಮತನವನ್ನು ಉಳಿಸಿಕೊಂಡು ಕೇವಲ ಸ್ವಾರ್ಥಕ್ಕಾಗಿ ಬದುಕದೆ ಸಮಾಜದ ಏಳಿಗೆಗಾಗಿ ನಮ್ಮ ಕೊಡುಗೆಯನ್ನು ಕೊಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಲ್ಲ ಕಷ್ಟಗಳನ್ನು ಮೀರಿ ಉನ್ನತ ವ್ಯಾಸಂಗ ಮಾಡುವದರ ಜೊತೆಗೆ ಐಎಎಸ್,ಐಪಿಎಸ್ ನಂತಹ ಗುರಿಗಳನ್ನು ಇಟ್ಟುಕೊಂಡು ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಹೆಮ್ಮೆಯ ಕಳಶವನ್ನು ತೊಡಿಸಲು ಪಣತೊಡಬೇಕು ಎಂದರು.ಈ ವೇಳೆ ಅಥಣಿ ತಾಲೂಕಿನ ಜಯಕರ್ನಾಟಕ ಸಂಘಟನೆಯ ಉಪಾಧ್ಯಕ್ಷರಾಗಿ ಆಕಾಶ ದಗಾಂವ ಅವರನ್ನು ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ಅಧ್ಯಕ್ಷರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು.
ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದ  ಉದ್ಘಾಟಕರಾಗಿ ಸಿಂದಗಿ ಸಿಪಿಐ ಬಸವರಾಜ ಬೀಸನಕೊಪ್ಪ,ಮುಖ್ಯ ಅಥಿತಿಗಳಾಗಿ ರಾಜ್ಯಮಟ್ಟದ ಉಪನ್ಯಾಸಕರಾದ ಮಹಾಲಿಂಗ ಮೇತ್ರಿ ಮತ್ತು ಅಥಿತಿಗಳಾಗಿ ಶಿವು ಗುಡ್ಡಾಪೂರ, ಚಿದಾನಂದ ಶೇಗುಣಸಿ,ದೀಪಕ ಬುರ್ಲಿ,ಕಿರಣ ಮೆಂಡಿಗೇರಿ,ದೀಪಕ ಶಿಂಧೇ,ಶಂಭು ತೇರದಾಳ,ರಾಜು ವಿಜಾಪುರ, ಹನುಮಂತ ಸಿಂಧೂರ ಸೇರಿದಂತೆ ಹಲವರು ಆಗಮಿಸಿದ್ದು ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು,ಹಾಲಿ ಹಾಗೂ ಮಾಜಿ ಪಂಚಾಯತಿ ಸದಸ್ಯರು,ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ವಿಜಯಕುಮಾರ ಪವಾರ ವಹಿಸಿದ್ದು ಜಯಕರ್ನಾಟಕ ಸಂಘಟನೆಯ ವಿವಿಧ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.