Belagavi News In Kannada | News Belgaum

ಸಮುದಾಯದ ಅಗತ್ಯತೆಗಳನ್ನು ಗುರುತಿಸಿ ಸಮಾಜ ಮತ್ತು ಜನಸಾಮಾನ್ಯರ ಅಭಿವೃದ್ಧಿಗೋಸ್ಕರ ಪ್ರಾರಂಭಿಸಿದ ಧರ್ಮಸ್ಥಳ ಗ್ರಾಮಭಿವೃದ್ಧಿ

ಬೆಳಗಾವಿ: ಮಾರ್ಚ-07: “ಸಮುದಾಯದ ಅಗತ್ಯತೆಗಳನ್ನು ಗುರುತಿಸಿ ಸಮಾಜ ಮತ್ತು ಜನಸಾಮಾನ್ಯರ ಅಭಿವೃದ್ಧಿಗೋಸ್ಕರ ಪ್ರಾರಂಭಿಸಿದ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯು ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ” ಎಂದು
ಬೆಳಗಾವಿ ಸಂಸದೆ ಸುಮಂಗಲಾ ಅಂಗಡಿ ಹೇಳಿದರು.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹಲಗಾ ಗ್ರಾಮ ಪಂಚಾಯತ, ಹಲಗಾದ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಹಲಗಾದ ಮಂಜುನಾಥ ನವಜೀವನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ‘ನಮ್ಮೂರು-ನಮ್ಮ ಕೆರೆ’ ಕಾರ್ಯಕ್ರಮ ಉದ್ಘಾಟಿಸಿ
ಕೆರೆ ಹಸ್ತಾಂತರ ಮಾಡಿ, ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಅವರು,” ಕೆರೆಯ ಹೂಳೆತ್ತಿ ಜೀವಜಲ ಉಳಿಸುವ ಮತ್ತು ಭೂತಾಯಿಯನ್ನು ತಂಪಾಗಿಸುವ ಕೆಲಸ ಮಾಡುತ್ತಿದೆ” ಎಂದು ಅಭಿಪ್ರಾಯ ಪಟ್ಟರು.

ನಾಮ ಫಲಕ ಅನಾವರಣ ಮಾಡಿದ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, “ಧರ್ಮಸ್ಥಳಕ್ಷೇತ್ರದ ಕಾರ್ಯ ನಿಜ ಧರ್ಮದ ಕಾರ್ಯವಾಗಿದೆ. ಧಾರ್ಮಿಕ ನೆಲೆಯಲ್ಲಿ ಬಹಳಷ್ಟು ಜನಪರ ಕೆಲಸ ಮಾಡುತ್ತಿದೆ. ಮನುಷ್ಯನ ಬಾಯಾರಿಕೆಯನ್ನμÉ್ಟೀ ಅಲ್ಲದೆ ಪ್ರಾಣಿ-ಪಕ್ಷಿಗಳಿಗೆ ನೀರು ಕೊಡುವ ಪುಣ್ಯದ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅವರು ಮಾತನಾಡಿ, “ಸಮಾಜದಲ್ಲಿ ಶ್ರೀಮಂತರಿಗಿಂತ ಹೃದಯವಂತರ ಅವಶ್ಯಕತೆ ಹೆಚ್ಚಿದೆ. ಅಂತಹ ಹೃದಯವಂತರ ಸಹಕಾರದಿಂದ 11 ಎಕರೆ ಕೆರೆಯನ್ನು 11ಲಕ್ಷ ಅನುದಾನದಲ್ಲಿ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಕೆರೆಯ ಹೂಳೆತ್ತಿದ ಮಣ್ಣನ್ನು ಈ ಭಾಗದ ಅಂದಾಜು 450 ಜನ ರೈತರು ತಮ್ಮ ಕೃಷಿ ಭೂಮಿಗೆ ಬಳಸಿಕೊಂಡಿದ್ದಾರೆ. ಅದರಿಂದ 8 ಲಕ್ಷ ಹಣ ಸಂಗ್ರಹಿಸಲಾಗಿದೆ” ಎಂದರು.

ಕೆರೆ ಸಮಿತಿ ಅಧ್ಯಕ್ಷ   ಜಿನ್ನಪ್ಪ ದಮ್ಮಣಗಿ ಅಧ್ಯಕ್ಷತೆ ವಹಿಸಿದ್ದರು.
ಸಿದ್ಧಸೇನ ಮುನಿಮಹಾರಾಜರು ಸಾನಿಧ್ಯ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ
ಪ್ರದೀಪ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ
ಗಣಪತಿ ಮಾರಿಹಾಳಕರ, ಚಾರುಕೀರ್ತಿ ಸೈಬನ್ನನವರ, ಅಣ್ಣಾಸಾಹೇಬ ಘೋರ್ಪಡೆ,ಧನ್ಯಕುಮಾರ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಮಂಜುನಾಥ ಎನ್. ಆರ್. ಸ್ವಾಗತಿಸಿದರು. ರೇಣುಕಾ ಅಂಬಿಗೇರ ನಿರೂಪಿಸಿದರು. ಮಂಜುನಾಥ ಗೌಡ ವಂದಿಸಿದರು.