Belagavi News In Kannada | News Belgaum

ಲೆಟ್ಸ ಮೀಟ್ ಯಾಂಡ್ ಟಾಕ್ ಟುಗೆದರ್ ಇಪ್ ಪಾಸಿಬಲ್

ಲೆಟ್ಸ ಮೀಟ್ ಯಾಂಡ್ ಟಾಕ್ ಟುಗೆದರ್ ಇಪ್ ಪಾಸಿಬಲ್

ರವಿ ಅವತ್ ಪೋನ್ ಪಿಕ್ ಮಾಡ್ಬೇಕಿತ್ ನೋಡು ದೋಸ್ತ.ಇಲ್ಲಂದ್ರ ಅಣ್ಣಾ ಇರ್ತಿದ್ದ ಅನಸ್ತೈತಿ.
ಕುಮಾರ್ ಗಾ ಭಾಳ ಸಲಾ ಹೇಳಿದ್ನಿ ದೋಸ್ತ…ಬೈಕ್ ಸ್ವಲ್ಪ ನೋಡಕೊಂಡ್ ಓಡ್ಸು ಅಕ್ಸಿಡೆಂಟ್ ಭಾಳ ಆಗಾತಾವು ಲಾಂಗ್ ರೂಟ್ ಹೋಗುವಾಗ ಹೆಲ್ಮೆಟ್ ಹಾಕು ಅಂತ ಆದ್ರ ಕೇಳಲಿಲ್ಲ ಮಗಾ ಹೋಗ್ಬಿಟ್ಟಲೇ…ಪಾ

ನಮಗರೆ ಎಲ್ಲಿ ಗೊತ್ತಿತ್ತು?? ಬರೇ ನಮ್ ಕೆಲಸ,ದುಡಿಮಿ,ರೊಕ್ಕಾ ಕಮಾಯಿ,ಮನಿ,ಕಾರು ಅಂತ ಉಳದ್ ಬಿಟ್ವಿ ಸಣ್ಣಾಂವ ಇದ್ದಾಗ ನಾ ಪರದೇಶಿ ಮಗಾ ಅಂತಾ ಜ್ವಾಕಿ ಮಾಡಿದ್ದ ರಕಮಾಯಿ ತೀರಕೊಂಡ ಎರಡ ವರ್ಷ ಆದು ಅಂತ ಮೊನ್ನಿ ಊರಿಗಿ ಹೋದಾಗ ಗೊತ್ತ ಆತು…

ವಿಜಿ ನಿಂಗೆ ಗೊತ್ ಅಲ್ಲಾ ಮಗಾ ನಮ್ದು ಸಿಟಿ ಜೀವನ…ಅಪರೂಪಕ್ಕೆ ಸಿಗೋದು ಒಂದ್ ವೀಕ್ ಆಪ್ ಅದರಲ್ಲೂ ಓವರ್ ಟೈಮ್ ವರ್ಕ್ ಮಾಡಿದ್ರೆ ಎಕ್ಸಟ್ರಾ ಸಂಬಳ ಕೊಡ್ತಾರೆ. ನಿಜಾ ಹೇಳ್ಬೇಕು ಅಂದ್ರೆ ಸಂಜೆ ಊಟಾ ಮಾಡಿಲ್ಲ ಅಂದ್ರೂ ಪರ್ವಾಗಿಲ್ಲ ಹಾಸಿಗೆ ಸಿಕ್ಕಿದ್ರೆ ಸಾಕು ಅನ್ನೊವಷ್ಟು ದುಡೀತಾ ಇದೀವಿ…ನಾನು ನೈಟ್ ಶಿಪ್ಟು ಅವಳು ಡೇ ಟೈಮ್ ಅಲ್ಲಿ ಗಾರ್ಮೆಂಟ್ಸು ಸದ್ಯಕ್ಕೆ ಮಕ್ಕಳು ಬೇಡಾ ಅಂತ ಡಿಸೈಡ್ ಮಾಡಿದಿವಿ ಯಾಕಂದ್ರೆ ಟೈಮೆ ಇರಲ್ಲ ಮಗಾ…ಅದರಲ್ಲೂ ಅವಳು ಹೆರಿಗೆ ರಜೆ ತಗೊಂಡ್ರೆ ಸಂಸಾರ ಸಾಗ್ಬೇಕಲ್ಲ…

ಇಂತಹ ಮಾತುಗಳನ್ನ ಆಗಾಗ ಕೇಳುತ್ತಲೆ ಇರುತ್ತೇವೆ.ಇನ್ಯಾರದೋ ಬಾಯಿಂದ ಕೇಳಿ ಅಯ್ಯೋ ಪಾಪ ಅನ್ನುವ ನಾವುಗಳು ಕೂಡ ಯಡವಟ್ಟು ರಾಯರೇ ಅನ್ನುವದು ಅಂತಹದ್ದೊಂದು ಘಟನೆ ನಮ್ಮ ಬದುಕಿನಲ್ಲಿ ನಡೆದಾಗಲೇ ನಮಗೆ ಅರ್ಥವಾಗುತ್ತದೆ ಆ ಕ್ಷಣಕ್ಕೆ ನಾವು ದುಃಖಕ್ಕೆ ಒಳಗಾಗುತ್ತೇವೆ.ಆದರೆ ಮತ್ತೆ ಮರೆವು ಮತ್ತದೆ ಆಲಸಿತನ,ಮತ್ತದೆ ಅಹಂಕಾರ,ಮತ್ತದೆ ತಪ್ಪುಗಳ ಪುನರಾವರ್ತನೆ ಮರುಕಳಿಸುತ್ತಲೇ ಇರುತ್ತದೆ.
ದಿನದ ಇಪ್ಪತ್ತನಾಲ್ಕು ಗಂಟೆಯೂ ಗೂಗಲ್ ಮೀಟ್,ವರ್ಕ್ ಪ್ರಮ್ ಹೋಮ್,ಆಫಿಸ್ ಕೆಲಸ,ಗೌರ್ಮೆಂಟ್ ಡ್ಯೂಟಿ, ಟ್ರಾವೆಲಿಂಗ್,ಹೀಗೆ ಸದಾಕಾಲವೂ ಬ್ಯೂಜಿ ಬ್ಯೂಜಿ ಯಾಂಡ್ ಆಲ್ ವೇಜ್ ಬ್ಯೂಜಿ ಯಾಗಿಯೇ ಇರುವ ನಮಗೆ ಟೈಮ್ ಎಲ್ಲಿದೆ ಅಲ್ಲವಾ???

ಆದರೆ ಮುಂದೊಮ್ಮೆ ನಮ್ಮ ಕೊನೆಗಾಲಕ್ಕೆ,ಬದುಕಿನ ಇಳಿಸಂಜೆಗೆ,ಅಥವಾ ರಿಟೈರ್ ಮೆಂಟಿನ ಸಮಯಕ್ಕೆ ಓರಗೆಯವರು,ಬಂಧುಗಳು,ಸ್ನೇಹಿತರು ಕೊನೆಪಕ್ಷ ಮನೆಯವರು ಕೂಡ ನಮ್ಮೊಂದಿಗೆ ಇಲ್ಲದಂತೆ ಮಾಡಿಕೊಂಡು ಬಿಡುತ್ತೇವೆ.ಎಲ್ಲರೂ ಮಾಡುವದು ಹೊಟ್ಟೆಗಾಗಿ ಮತ್ತು ಬಟ್ಟೆಗಾಗಿ ಅನ್ನುವ ಅರಿವಿದ್ದರೂ ಕೂಡ ಯಾವುದೋ ಮಾಯೆಯಲ್ಲಿ ಎಲ್ಲವನ್ನೂ ಮರೆತು,ಸಂಭಂಧಿಗಳು,ಸ್ನೇಹಿತರು, ಕಚೇರಿಯ ಸಿಬ್ಬಂದಿ ಜೊತೆಗಿನ ಉಭಯ ಕುಶಲೋಪರಿಯನ್ನ ಮರೆತು ಗುಡ್ ಮಾರ್ನಿಂಗ್ ಗುಡ್ ನೈಟ್ ಎಂಬ ಅರ್ಥವಿಲ್ಲದ ಮೆಸೇಜುಗಳಲ್ಲಿ ಕಳೆದು ಹೋಗುತ್ತೇವೆ.

ನಿಧಾನಕ್ಕೆ ನಮ್ಮ ಓರಗೆಯವರು ಇನ್ನಿಲ್ಲವಾಗಿರುತ್ತಾರೆ.
ಯಾವುದೋ ಒಂದು ಕಾಲಘಟ್ಟದಲ್ಲಿ ಮಡದಿಯೋ,ಮಕ್ಕಳೋ, ಅಣ್ಣ,ತಮ್ಮ,ಅಕ್ಕ,ತಂಗಿ ಅಷ್ಟೇ ಏಕೆ ನಮಗೆ ಜೀವಕೊಟ್ಟು ಅಷ್ಟೇ ಪ್ರೀತಿಯಿಂದ ತಮ್ಮ ಇಡೀ ಬದುಕನ್ನೇ ನಮ್ಮನ್ನು ಬೆಳೆಸಲು ಸವೆಸಿದ ಅಪ್ಪ ಅಮ್ಮ ಕೂಡ ಬಾರದ ಲೋಕಕ್ಕೆ ಹೊರಟು ನಿಂತು ಬಿಡುತ್ತಾರೆ.

ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಸನ್ಯಾಸಿಯಾಗಿ ಸತ್ಸಂಗ ಪರಿತ್ಯಾಗಿಯಾಗುವದು,ಮಲ್ಟಿ ನ್ಯಾಷನಲ್ ಕಂಪನಿಯ ಮಾಲೀಕನೊಬ್ಬ ತನ್ನ ಗೆಳೆಯನ ಹೆಸರಿಗೆ ವಿಲ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವದು,ಕೋಟ್ಯಾಧೀಶನೊಬ್ಬ ಭಿಕ್ಷೆ ಬೇಡುವ ಹಂತಕ್ಕೆ ಇಳಿದು ಬಿಡುವದು,ಒಂದು ಕಾಲದ ಸೂಪರ್ ಹಿಟ್ ನಟ ನಟಿಯರು ಬೀದಿ ಹೆಣವಾಗುವದು ಇದೆಲ್ಲವನ್ನೂ ಎಲ್ಲೋ ಒಂದು ಕಡೆ ಕೇಳಿಯೋ ಕಣ್ಣ ಮುಂದೆ ನೋಡಿಯೋ ತಿದ್ದಿಕೊಳ್ಳಬೇಕಾದ ನಾವು ಸುಧಾರಿಸುವದೇ ಇಲ್ಲವಲ್ಲ.

ಗುರ್ತು ಸಿಕ್ತಾ ಸರ್ ನಾನು ನಿಮ್ ಸ್ಟುಡೆಂಟೂ ಹ್ಯಾಗಿದಿರಿ?? ಅಂಕಲ್ ನಿಮ್ ಪಕ್ಕದ್ ಮನೆ ಹುಡುಗಾ ನಾನು ಹತ್ ವರ್ಷದ ಹಿಂದೆ ಅಲ್ಲೆ ಬಾಡಿಗೆ ಇದ್ವಿ ಆಂಟಿ ಹ್ಯಾಗಿದಾರೆ?? ಮತ್ತೆನ್ ಸುಮಾ ಹೇಗಿದಿಯಾ ಗಂಡಾ ಕುಡಿತಾನೆ,ಹೊಡಿತಾನೆ ಅಂತ ಯಾವತ್ತೋ ನೀನು ಹೇಳಿದ್ ನೆನಪು ಈಗ ಎಲ್ಲಾ ಸರಿ ಹೋಯ್ತಾ?? ಲೇ ಅಜೀತಾ ನಿಮ್ ಮನಿ ಪರಿಸ್ಥಿತಿ ಮೊದಲೆ ಸರಿ ಇರಲಿಲ್ಲ ನಿಂಗ್ ಒಬ್ಳು ತಂಗಿ ಇದ್ಳಲ್ಲಾ ಮದುವೆ ಮಾಡಿದ್ರಿ ಎನ್ ದೋಸ್ತಾ ಅವ್ವಾ ಹೆಂಗ್ ಅದಾಳ?? ಇದನ್ನ ಸುಮ್ನೆ ಇಟ್ಕೋ ಹೇಳ್ತೆನಿ?? ಇದು ನನ್ನ ವಿಜಿಟಿಂಗ್ ಕಾರ್ಡು ಭೇಟಿ ಆಗ್ಬೇಕು ಅನಿಸಿದಾಗ ಬಂದ್ ಬಿಡು.ಹೀಗೆ ಒಬ್ಬರ ಕಷ್ಟವನ್ನ ಒಬ್ಬರು ಕೇಳುತ್ತಾ ಸಾಧ್ಯವಾದರೆ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ನಾವು ಬದುಕಿದ್ದೇ ಆದರೆ ಕೊನೆಯ ಕ್ಷಣಕ್ಕೆ ನಮ್ಮನೂ ಯಾರೋ ಒಬ್ಬರು ಮಾತನಾಡಿಸುತ್ತಾರೆ ಅನ್ನುವ ನಂಬಿಕೆ ನನ್ನದು.

ಸರ್ ನಿಮಗೆ ನೆನಪಿದೆಯೋ ಇಲ್ವೋ ನನಗೆ ಗೊತ್ತಿಲ್ಲ ನಾನೀಗ ಫಾರೆನ್ನಲ್ಲಿ ಇರ್ತಿನಿ ಮೊನ್ನೆ ಬಂದಾಗ ನಿಮ್ ಅನಾರೋಗ್ಯದ ವಿಷಯ ತಿಳೀತು ಅವತ್ತು ಸ್ಕೂಲ್ ಫೀಜ್ ಕಟ್ಟೋಕೆ ದುಡ್ಡಿಲ್ದೆ ಇದ್ದಾಗ ನೀವೆ ನಂಗೆ ಹೆಲ್ಪ ಮಾಡಿದ್ರಿ ಅದಕ್ಕೆ ಪ್ರತಿಯಾಗಿ ಇದನ್ನ ಇಟ್ಕೊಳಿ ಅಂತ ಕವರ್ ಒಂದರಲ್ಲಿ ಒಂದಷ್ಟು ದುಡ್ಡನ್ನ ಕೊಟ್ಟು ಹಾಸಿಗೆಯಲ್ಲಿ ಮಲಗಿದ ವೃದ್ದ ಜೀವವೊಂದರ ಕೈಯನ್ನ ಎರಡು ಕೈಯಲ್ಲಿ ತಟ್ಟಿ ಒಂದು ಕಿರುನಗೆ ಬೀರಿ ಹೊರಡುವದರೊಳಗಿನ ಸಾರ್ಥಕತೆ ಬಹುಶ ಮತ್ತೆಲ್ಲೂ ಸಿಗಲಿಕ್ಕಿಲ್ಲ.

ಮೂಲತಃ ಮನುಷ್ಯ ಸಂಘ ಜೀವಿ ಆದ್ದರಿಂದ ಒಂದಷ್ಟು ಸಜ್ಜನರ ಜೊತೆಗೆ ಬೆರೆಯುವದನ್ನ,ಮತ್ತೊಬ್ಬರಿಗೆ ಸಾಧ್ಯವಾದಷ್ಟು ಸಹಾಯ ಮಾಡುವದನ್ನ,ಆಗಾಗ ಅವಕಾಶ ಸಿಕ್ಕಾಗ ಅವರ ಮನೆಗೆ ಹೋಗುವದನ್ನ,ಇಲ್ಲವೇ ನಮ್ಮ ಮನೆಗೆ ಕರೆಸಿ ಒನ್ ಬೈ ಟು ಟೀ ಕುಡಿಯುವದನ್ನ ಅಥವಾ ಕನಿಷ್ಠ ಪಕ್ಷ ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ನಮ್ಮ ಮೊಬೈಲಿನ ಕಾಂಟ್ಯಾಕ್ಟ್ ಲಿಸ್ಟಿನಲ್ಲಿ ಇರುವ ನಮ್ಮವರಿಗೊಂದು ಕಾಲ್ ಮಾಡಿ ಹ್ಯಾಗಿದೀರಿ ಅನ್ನುವದನ್ನ ಇಂದಿನಿಂದಲೇ ರೂಢಿಸಿಕೊಳ್ಳೋಣ ಅಲ್ಲವಾ?? ಲೆಟ್ಸ ಮೀಟ್ ಯಾಂಡ್ ಟಾಕ್ ಟುಗೆದರ್..ಇಪ್ ಪಾಸಿಬಲ್…ಯಾಕೆ ಅಂದ್ರೆ ಮುಂದೊಮ್ಮೆ ನಮಗೆ ಸಮಯ ಸಿಕ್ಕಾಗ ನಮ್ಮವರು ನಮ್ಮೊಂದಿಗೆ ಇರುತ್ತಾರೋ ಇಲ್ಲವೋ ಯಾರಿಗೆ ಗೊತ್ತು…

ದೀಪಕ ಶಿಂಧೇ