Belagavi News In Kannada | News Belgaum

ಜಪಾನ್ ಯೋಧರನ್ನು ಬೀಳ್ಕೊಟ್ಟ ಭಾರತೀಯ ಸೇನೆ

ಬೆಳಗಾವಿ: ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ನೇತೃತ್ವದಲ್ಲಿ ಫೆ. 27ರಿಂದ ಪ್ರಾರಂಭವಾಗಿದ್ದ 12 ದಿನಗಳ ಕಾಲ ನಡೆದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ ಇಂದು ಸಂಪನ್ನವಾಗಿದ್ದು, ಭಾರತೀಯ ಸೇನೆಯಿಂದ ಜಪಾನ್ ಯೋಧರಿಗೆ ಬೀಳ್ಕೊಡುಗೆ ನೀಡಲಾಯಿತು.
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಹನ್ನೆರಡು ದಿನಗಳ ಕಾಲ ನಡೆದ ಜಂಟಿ ಸಮರಾಭ್ಯಾಸದಲ್ಲಿ ಎರಡು ದೇಶಗಳ ಯುದ್ಧದ ಕಾರ್ಯಾಚರಣೆ ಜೊತೆಗೆ ತಂತ್ರಜ್ಞಾನಗಳ ಬಗ್ಗೆ ತರಬೇತಿ ನಡೆಸಲಾಗಿತ್ತು.
ಕೊನೆಯ ದಿನವಾದ ಇಂದು ಭಾರತೀಯ ಸೇನೆಯಿಂದ ಜಪಾನ್ ಯೋಧರಿಗೆ ಬಿಳ್ಕೊಡುಗೆ ನೀಡಲಾಯಿತು. ಭಾರತ- ಜಪಾನ್ ಜಂಟಿ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ 15ನೇ ಬೆಟಾಲಿಯನ್‍ನ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‍ನ 30ನೇ ದಳದ ತಲಾ 40 ಯೋಧರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಾರ್ಷಿಕ ತರಬೇತಿ ಆಗಿರುವ ಧರ್ಮ ಗಾರ್ಡಿಯನ್ ಕಾರ್ಯಕ್ರಮ ಅಂಗವಾಗಿ ಕರುನಾಡಿನಲ್ಲೇ ಈ ಸಮರಾಭ್ಯಾಸ ನಡೆದಿರೋದು ಮತ್ತೊಂದು ವಿಶೇಷವಾಗಿತ್ತು. ಮೂರು ದಿನಗಳ ಕಾಲ ನಡೆದ ಸಮರಾಭ್ಯಾಸದ ಯೋಧರ ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು.
ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿರುವ ಈ ಸಮರಾಭ್ಯಾಸದಲ್ಲಿ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‍ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳನ್ನು ನಡೆಸಲಾಯಿತು.//////