Belagavi News In Kannada | News Belgaum

ರಾತ್ರಿ ಮೋಜು ಮಸ್ತಿ; ಬೆಳಗ್ಗೆ ಯುವಕನ ಶವ ಪತ್ತೆ

ಗದಗ: ತಡರಾತ್ರಿವರೆಗೆ ಪಾರ್ಟಿ, ಮೋಜು ಮಸ್ತಿ ಮಾಡಿದ್ದ ಯುವಕನ ಶವವನ್ನು ಸ್ಥಳೀಯರು ಬೆಳಗ್ಗೆ ನೋಡಿ ಆಶ್ಚರ್ಯಗೊಂಡ ಘಟನೆ ನರಗುಂದ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 24 ವರ್ಷದ ಶರಣಪ್ಪ ಶೆಲ್ಲಿಕೇರಿ ಯುವಕ ಕೊಲೆಯಾದ ದುರ್ದೈವಿ. ಶರಣಪ್ಪ ಅವರ ಕತ್ತು ಹಿಸುಕಿ, ಕೊಲೆಮಾಡಿ ದುರ್ಗಾದೇವಿ ಗುಡಿ ಕಟ್ಟೆ ಮೇಲೆ ಶವವನ್ನು ಎಸೆದು ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಘಟನೆ ವಿವರ: ಗ್ರಾಮದ ಎಲ್ಲ ರೈತರ ಕಬ್ಬು ಬೆಳೆ ಕಟಾವು ಮುಗಿದ ನಂತರ ಟೂರ್ ಹೋಗ್ತಾರೆ ಅಥವಾ ಪಾರ್ಟಿ ಮಾಡುತ್ತಾರೆ. ಅದೇ ರೀತಿ ನಿನ್ನೆ ಕೂಡಾ ಗ್ರಾಮದ ಹೊರಭಾಗದಲ್ಲಿ ಕಬ್ಬು ಬೆಳೆಗಾರರು, ಕಬ್ಬು ಕಟಾವು ಗ್ಯಾಂಗ್, ಟ್ರ್ಯಾಕ್ಟರ್ ಮಾಲೀಕ, ಚಾಲಕರು ಒಟ್ಟಾಗಿ ರಾತ್ರಿ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ಡಿಜೆ ಹಾಕಿ ಕುಡಿದು, ಕುಣಿದು ಕುಪ್ಪಳಿಸಿ ತಡರಾತ್ರಿವರೆಗೆ ಮಜಾ ಮಾಡಿದ್ದಾರೆ. ಆದರೆ ಬೆಳಗ್ಗೆ ನೋಡುವಷ್ಟರಲ್ಲಿ ಗ್ರಾಮದ ದುರ್ಗಾದೇವಿ ಕಟ್ಟೆ ಮೇಲೆ ಶರಣಪ್ಪ ಶೆಲ್ಲಿಕೇರಿ ಶವವಾಗಿ ಪತ್ತೆಯಾಗಿದ್ದಾನೆ.

ಮೃತ ಶರಣಪ್ಪನ ಕುಟುಂಬ ತೋಟದ ಮನೆಯಲ್ಲಿ ವಾಸವಿತ್ತು. ನಿನ್ನೆ ರಾತ್ರಿ ಸಹ ಮನೆಯಿಂದ ಹೋರಡುವ ವೇಳೆ ಕುಟುಂಬಸ್ಥರಿಗೆ, ಕಬ್ಬು ಗ್ಯಾಂಗ್ ಎಲ್ರೂ ಸೇರಿ ಪಾರ್ಟಿ ಏರ್ಪಡಿಸಲಾಗಿದೆ. ಪಾರ್ಟಿ ಮುಗಿಸಿಕೊಂಡು ತಡವಾಗಿ ಬರುವುದಾಗಿ ಹೇಳಿದ್ದಾನೆ. ಆದರೆ ಕುಟುಂಬದವರು ಬೆಳಗ್ಗೆ ಕಾರ್ಮಿಕರನ್ನು ಕರೆತರಲು ಫೋನ್ ಮಾಡಿದ್ದಾರೆ. ಆದ್ರೆ ಶರಣಪ್ಪ ಫೋನ್‍ಗೆ ಉತ್ತರಿಸಲಿಲ್ಲ.

ರಾತ್ರಿ ಪಾರ್ಟಿ ಮಾಡಿ ಮಲಗಿರಬಹುದು ಎಂದು ಎಲ್ಲರು ತಿಳಿದುಕೊಂಡಿದ್ದಾರೆ. ನಂತರ ದುರ್ಗಾದೇವಿ ಕಟ್ಟೆ ಮೇಲೆ ಸ್ಥಳೀಯರು ಶವವನ್ನು ಹತ್ತಿರದಿಂದ ಗಮನಿಸಿದಾಗ ಶಾಕ್ ಆಗಿದ್ದಾರೆ. ಈ ಮಾಹಿತಿಯನ್ನು ಶರಣಪ್ಪ ಕುಟುಂಬಕ್ಕೆ ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಶರಣಪ್ಪನ ಶವ ಕಂಡು ಕಂಗಾಲಾಗಿದ್ದಾರೆ.

ನಂತರ ಸ್ಥಳಕ್ಕೆ ನರಗುಂದ ಪೊಲೀಸರು ಶ್ವಾನದಳ ಮೂಲಕ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಯುವಕನ ಶವದ ಮೇಲೆ ಕತ್ತು ಹಾಗೂ ಮೈಮೇಲೆ ಗಾಯದ ಗುರುತುಗಳು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ರಾತ್ರಿ ಪಾರ್ಟಿನಲ್ಲಿ ಪಾಲ್ಗೊಂಡವರ ಮೇಲೆ ನಿಗಾ ವಹಿಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////