Belagavi News In Kannada | News Belgaum

ಕಾಂಗ್ರೆಸ್​ ಸೋಲಿನ ಪರಾಮರ್ಶೆ: ಕಾರ್ಯಕಾರಿ ಸಮಿತಿ ಸಭೆ

ದೆಹಲಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಸೋಲನ್ನು ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪಕ್ಷದ ಅತ್ಯುನ್ನತ ಕಾರ್ಯಕಾರಿ ಪ್ರಾಧಿಕಾರವಾದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯು ಸಭೆ ಸೇರಲಿದೆ. ಈ ವರ್ಚುವಲ್​ ಸಭೆಯು ನಾಳೆ ಸಂಜೆ 4 ಗಂಟೆಯಿಂದ ಆರಂಭಗೊಳ್ಳಲಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಚರ್ಚೆ ನಡೆಸುವುದು ಈ ಸಭೆಯ ಪ್ರಮುಖ ಅಜೆಂಡಾವಾಗಿದೆ.

ಪಂಜಾಬ್​ನಲ್ಲಿ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್​​ ಆಮ್​ ಆದ್ಮಿ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದೆ. 2017ರಲ್ಲಿ 80 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್​ ಈ ಬಾರಿ ಕೇವಲ 18 ಸೀಟುಗಳನ್ನು ಗೆಲ್ಲಲು ಮಾತ್ರ ಶಕ್ತವಾಗಿದೆ. ಇತ್ತ ಉತ್ತರಾಖಂಡ್​, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್​ – ಬಿಜೆಪಿ ನೇರ ಹಣಾಹಣಿ ಇರಲಿದೆ ಎಂದು ನೀರಿಕ್ಷಿಸಲಾಗಿತ್ತಾದರೂ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್​ ಸೋತು ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿದೆ.

ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತಿದ್ದೇವೆ. ಇದರಿಂದ ನಾವು ಪಾಠವನ್ನು ಕಲಿಯುತ್ತೇವೆ. ಹಾಗೂ ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮಾಡುವ ಮೂಲಕ ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.