Belagavi News In Kannada | News Belgaum

ಉಕ್ರೇನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ 21 ವಿದ್ಯಾರ್ಥಿಗಳು

ಬೆಳಗಾವಿ,ಮಾ.12 : ಉಕ್ರೇನ್ ಯುದ್ಧ ಭೂಮಿಯಿಂದ ಜಿಲ್ಲೆಯ 21 ವಿದ್ಯಾರ್ಥಿಗಳನ್ನು “ಆಪರೇಷನ್ ಗಂಗಾ” ಮೂಲಕ ವಾಪಸ್ಸು ಕರೆತರಲಾಗಿದೆ. ರಾಯಬಾಗ, ಕಾಗವಾಡ, ನಿಪ್ಪಾಣಿಯ ತಲಾ ಒಬ್ಬೊಬ್ಬರು ವಿದ್ಯಾರ್ಥಿ ಹಾಗೂ ಬೈಲಹೊಂಗಲದ ಇಬ್ಬರು, ಚಿಕ್ಕೋಡಿಯ ಇಬ್ಬರು, ಗೋಕಾಕದ ಇಬ್ಬರು, ಮೂಡಲಗಿಯ ಇಬ್ಬರು, ಬೆಳಗಾವಿಯ ಐವರು ಸೇರಿ ಒಟ್ಟು 21 ವಿದ್ಯಾರ್ಥಿಗಳನ್ನು ಕೇಂದ್ರ, ರಾಜ್ಯ ಸರ್ಕಾರದ ಸಹಾಯದಿಂದ ಜಿಲ್ಲಾಡಳಿತ ಸುರಕ್ಷಿತವಾಗಿ ಕರೆತಂದು ಅವರವರ ಮನೆಗಳಿಗೆ ತಲುಪಿಸಿದೆ.
ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ತಹಶೀಲ್ದಾರರು ಹೀಗೆ ಜಿಲ್ಲೆಯ ಅಧಿಕಾರಿಗಳು ಉಕ್ರೇನ್‌ನಲ್ಲಿರುವ ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿಗಳನ್ನು ಖುದ್ದಾಗಿ ಪಡೆದುಕೊಂಡು ಅವರನ್ನು ಸುರಕ್ಷಿತವಾಗಿ ಕರೆತರುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಕ್ರೇನ್‌ನಲ್ಲಿರುವ ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿಯನ್ನು ನೀಡುವುದಕ್ಕಾಗಿ ಪೋಷಕರಿಗೆ, ಸಾರ್ವಜನಿಕರಿಗೆ ಸಹಾಯವಾಗಲಿ ಅನ್ನುವ ಕಾರಣಕ್ಕಾಗಿ 24*7 ಸಹಾಯವಾಣಿ ಕೇಂದ್ರವನ್ನೂ ತೆರಯಲಾಗಿದೆ.
ಸರ್ಕಾರದ ನಿಯಮಗಳನುಸಾರ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ಕರೆತರಲಾಗುತ್ತಿದೆ, ಈ ಸಂಬಂಧ ಸಾರ್ವಜನಿಕರು ಮಾಹಿತಿಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.