ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ – ಮೃಣಾಲಿ ಜೋಶಿ
ಅಥಣಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ / ಆಹಾರ ಮೇಳ ಮತ್ತು ಸಾಧಕರ ಸನ್ಮಾನ

ಅಥಣಿ: ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ಅನೇಕ ಪಾತ್ರಗಳನ್ನು ನಿಭಾಯಿಸುವ ಮಹಿಳೆಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದೆ ಎಂದು ಧಾರವಾಡದ ಸಂಸ್ಕೃತ ಶಿಶು ಮಂದಿರದ ಸಂಸ್ಥಾಪಕ ಅಧ್ಯಕ್ಷೆ ಮೃಣಾಲಿ ಜೋಶಿ ಹೇಳಿದರು.
ಅವರು ರವಿವಾರ ಸ್ಥಳೀಯ ಅಥಣಿ ಲೇಡೀಸ್ ಸೋಶಿಯಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಹಾರ ಮೇಳ ಮತ್ತು ಸಾಧಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿಯೊಂದು ಕುಟುಂಬದಲ್ಲಿನ ಮಾತೆಯರು ಸುಸಂಸ್ಕೃತರಾಗಿ ದೇಶದ ಆಡಳಿತಕ್ಕೆ ಸಮರ್ಥ ನೇತೃತ್ವದ ಜೊತೆಗೆ ಮಾತೃತ್ವ ಶಕ್ತಿಯನ್ನು ಒಗ್ಗೂಡಿಸಿದಾಗ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಮುಂದುವರೆದ ತಂತ್ರಜ್ಞಾನದಲ್ಲಿ ಇಂದು ನಮ್ಮ ಮಕ್ಕಳು ಮತ್ತು ಯುವತಿಯರು ದಾರಿ ತಪ್ಪುತಿದ್ದು, ಮನೆಯಲ್ಲಿನ ಮಾತೆಯರು ಎಚ್ಚರ ವಹಿಸುವುದು ಅಗತ್ಯವಿದೆ. ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ ಮನ್ನಣೆಯಿದೆ. ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವುದರ ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಳಿಸಿ ಕೊಡುವುದು ಬಹಳ ಅಗತ್ಯ ಇದೆ. ಟಿವಿ ಮತ್ತು ಮೊಬೈಲ್ ಹಾವಳಿಯಿಂದ ನಮ್ಮ ಮಕ್ಕಳನ್ನು ಮತ್ತು ಯುವಶಕ್ತಿಯನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ. ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅನೇಕ ಸಾಮಾಜಿಕ ಸೇವೆಯ ಜೊತೆಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಒಂದು ಕುಟುಂಬದ ನಿರ್ವಹಣೆಯ ಜೊತೆಗೆ ಅನೇಕ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಇಂದು ಸಾಧನೆ ಮಾಡಿದ್ದಾರೆ. ಅಂತಹ ಸಾಧಕರು ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ. ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಇದು ನೆಪಮಾತ್ರ, ಗಂಡು-ಹೆಣ್ಣು ಸಮಾಜದ ಎರಡು ಕಣ್ಣುಗಳು. ಸಂಸಾರ ಎಂಬ ಬಂಡೆಗೆ ಎರಡು ಗಾಲಿಗಳಿದ್ದಂತೆ. ಪುರುಷ ಮತ್ತು ಮಹಿಳೆಯ ಪಾತ್ರಗಳು ಯಾವುದೇ ಒಂದು ದಿನಕ್ಕೆ ಸೀಮಿತವಾಗುವುದಿಲ್ಲ. ವರ್ಷವಿಡಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಸುಸಂಸ್ಕೃತ ಸಮಾಜವನ್ನು ಮತ್ತು ಸಮರ್ಥ ಮತ್ತು ಸದೃಢ ದೇಶವನ್ನು ಕಟ್ಟಲು ಪ್ರತಿಯೊಬ್ಬ ಮಹಿಳೆಯರು ತಮ್ಮ ಮನೆಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರಗಳನ್ನು ರೂಡಿಸಿ ಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಕಲಿಸಿಕೊಡುವುದು ಅಗತ್ಯವಿದೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ವಿಜಯಪುರದ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ದೀಪಾಕ್ಷಿ ಜಾನಕಿ ಮಾತನಾಡಿ ಮಹಿಳೆಯರು ಎಂದರೆ ಕೇವಲ ಹೆರಿಗೆಯ ಯಂತ್ರಗಳಲ್ಲ. ಒಂದು ಕುಟುಂಬದ ಜವಾಬ್ದಾರಿಗೆ ಜೊತೆಗೆ ಸಮಾಜದ ಅನೇಕ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಗಂಡನ ಮನೆತನದ ಗೌರವ ಕಾಪಾಡುವುದರ ಜೊತೆಗೆ ತವರುಮನೆಗೆ ಪ್ರೀತಿ ಪಾತ್ರಳಾಗಿ ಕಾರ್ಯನಿರ್ವಹಿಸುತ್ತಾರೆ. ಅಂದಿನ ಕಾಲದಲ್ಲಿ ಮಹಿಳೆಯರು ಅನಕ್ಷರಸ್ಥರಾಗಿದ್ದರೂ ಕೂಡ ಭಾರತೀಯ ಕಲೆ, ಸಂಸ್ಕೃತಿ, ರಾಮಾಯಣ-ಮಹಾಭಾರತದಂತಹ ನೀತಿ ಕಥೆಗಳು ಅವರಿಗೆ ಬದುಕಿನ ಪಾಠವನ್ನು ಕಲಿಸಿದ್ದವು. ಇಂದು ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರು ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನನ್ನ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಶಿಕ್ಷಣವನ್ನು ಕಲಿಸಿಕೊಡಬೇಕು. ವಿಕಲಚೇತನ ಮಕ್ಕಳ ಬಗ್ಗೆ ಕೀಳರಿಮೆ ಬೇಡ, ಅವರಿಗೂ ಇತರರಂತೆ ಪ್ರೋತ್ಸಾಹ ನೀಡಿ ಬೆಳೆಸಬೇಕೆಂದು ಕರೆನೀಡಿದರು.
ಅಥಣಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕು. ಶ್ವೇತಾ ಹಾಡಕರ ಮಾತನಾಡಿ ಮಹಿಳೆ ತನ್ನ ಬದುಕಿನಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲುವದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಅವರು ಅಥಣಿ ಲೇಡೀಸ್ ಸೋಶಿಯಲ್ ಕ್ಲಬ್ ದ ಮಹಿಳೆಯರು ಸಂಘಟಿತರಾಗಿ ಇಷ್ಟು ದೊಡ್ಡ ಪ್ರಮಾಣದ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಚರ್ಮ ಕೈಗಾರಿಕೆ, ಕುಂಬಾರಿಕೆ, ಬಿದರಿನ ಬುಟ್ಟಿ ಮಾಡುವುದು, ಸೂಲಗಿತ್ತಿ, ಸಂಪ್ರದಾಯ ಗೀತೆ, ಕಲ್ಲು ಒಡೆಯುವ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಅಂಗಡಿಗಳಲ್ಲಿ ವಿವಿಧ ತಿಂಡಿತಿನಿಸುಗಳನ್ನು ತಯಾರಿಸಿದ ಮಹಿಳೆಯರು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರು ತಾವು ತಯಾರಿಸಿದ ಆಹಾರ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.
ಈ ವೇಳೆ ಸಂಜಯ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸುರೇಖಾ ಜಕನೂರ,ಉದ್ಯಮೆ ದಾರರಾದ ಶಿವಕುಮಾರ ಸವದಿ,
ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ, ಮತ್ತು ದಂಪತಿಗಳು, ಪುರಸಭಾ ಸದಸ್ಯ ರಾಜಶೇಖರ ಗುಡ್ಡೋಡಗಿ, ಆನಂದ ಟೊಣಪಿ, ಅಶೋಕ ದಾನಗೌಡರ ಇನ್ನಿತರರು ಉಪಸ್ಥಿತರಿದ್ದರು. ಪ್ರಿಯಾಂಕಾ ಗೊಂಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ದಾನಗೌಡರ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ತೆಲಸಂಗ ವಂದಿಸಿದರು.