Belagavi News In Kannada | News Belgaum

ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ  ಕೃಷಿ ಕಾಲೇಜಿನ ಸ್ಥಾಪನೆಗೆ ಅಡಿಗಲ್ಲು – ಮಾಜಿ ಡಿಸಿಎಂ ಸವದಿ

ದೇವರೆಡ್ಡೇರಹಟ್ಟಿ ಗ್ರಾಮದಲ್ಲಿ  ರೈತರಿಗೆ ಕೃಷಿ ಸಾಲ ವಿತರಣೆ  ಮತ್ತು  ರೈತಾಪಿ ಜನರ ಮನೆಬಾಗಿಲಿಗೆ ಕಂದಾಯ ಇಲಾಖೆ  ಕಾರ್ಯಕ್ರಮಕ್ಕೆ ಚಾಲನೆ

 

  1. ಮೂರು ತಿಂಗಳಲ್ಲಿ  ಕೊಕಟನೂರ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭ

 ಅಥಣಿ: ರೈತಾಪಿ ಜನರಿಗೆ ಮತ್ತು ರೈತರ ಮಕ್ಕಳ ಶಿಕ್ಷಣದ ಅನುಕೂಲತೆಗಾಗಿ ಈಗಾಗಲೇ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು  ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಮತ್ತು  ಕೇಂದ್ರ ಸಚಿವರೊಬ್ಬರನ್ನ  ಆಹ್ವಾನಿಸಿ ಲೋಕಾರ್ಪಣೆ ಗೊಳಿಸುವುದರ ಜೊತೆಗೆ  ಇತ್ತೀಚಿಗೆ  ಬಜೆಟ್ ದಲ್ಲಿ  ಮಂಜೂರಾದ  ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ  ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
 ಅವರು ಶನಿವಾರ ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದಲ್ಲಿ  ಅಮೃತ ಮಹೋತ್ಸವ ಹೊಸ್ತಿಲಲ್ಲಿರುವ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ನೀಡಲಾಗುವ ರೈತರಿಗೆ ಕೃಷಿ ಸಾಲ ವಿತರಣೆ ಹಾಗೂ  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರೈತಾಪಿ ಜನರ ಮನೆಬಾಗಿಲಿಗೆ ಕಂದಾಯ ಇಲಾಖೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಾನೊಬ್ಬ ರೈತನ ಮಗನಾಗಿ ರೈತರ ಕಷ್ಟ-ನಷ್ಟ ನನಗೆ ಗೊತ್ತಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಗಳಿದ್ದಾಗ ನಾನು   ಸಹಕಾರಿ ಸಚಿವನಾದ ಬಳಿಕ ರೈತರಿಗೆ ಸಹಕಾರಿ ಸಂಘಗಳ ಮೂಲಕ ಬಡ್ಡಿರಹಿತ ಸಾಲ  ನೀಡುವ ಯೋಜನೆಯನ್ನು  ಜಾರಿಗೆ ತಂದಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ ಅವರು ಯೋಜನೆಯಿಂದ ಅಥಣಿ ತಾಲೂಕಿನ ರೈತರಿಗೆ  ಹೆಚ್ಚು ಅನುಕೂಲವಾಗಿದೆ. ಮೂರು ಬಾರಿ ಸಾಲಮನ್ನಾ ಆದಾಗ ಅಥಣಿ ತಾಲೂಕಿನ ರೈತರಿಗೆ ಸುಮಾರು 300 ಕೋಟಿ  ರೂ  ಅನುಕೂಲವಾಗಿದೆ. ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ಪಡೆದ ರೈತರು  ನೀರಾವರಿ ಸೌಲಭ್ಯಗಳನ್ನು ಪಡೆದುಕೊಂಡು  ತಾಲೂಕಿನಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿ  ಐದು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ  ಹೆಚ್ಚು ಕಬ್ಬು ಬೆಳೆಯುವ ತಾಲೂಕು ನಮ್ಮದಾಗಿದೆ. ರೈತರ ಪರಿಶ್ರಮಕ್ಕೆ  ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಯಾವತ್ತೂ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
 22 ಹೊಸ ಸಹಕಾರಿ ಸಂಘಗಳ ಸ್ಥಾಪನೆ :  ಅಥಣಿ ತಾಲೂಕಿನಲ್ಲಿ  ಮಸರಗುಪ್ಪಿ ಮತ್ತು ಹೊಸಟ್ಟಿ  ಗ್ರಾಮಗಳು ಸೇರಿದಂತೆ  22 ಹೊಸ ಸಹಕಾರಿ ಸಂಘಗಳ ರಚನೆ ಮಾಡಲಾಗಿದೆ. ಒಟ್ಟು 142 ಸಹಕಾರಿ ಸಂಘಗಳ ಮೂಲಕ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಮುಂದುವರಿಸುವ ಮೂಲಕ  ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಸರಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಆರಂಭಿಸಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಅಥಣಿ ತಾಲೂಕಿಗೆ  ಕೃಷಿ ಕಾಲೇಜು ಒದಗಿಸಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ಮುಂಬರುವ ಮೂರು ನಾಲ್ಕು ತಿಂಗಳಲ್ಲಿ  ಅವರನ್ನು ಅಥಣಿಗೆ ಆಮಂತ್ರಿಸಿ  ಕಾಲೇಜು ಸ್ಥಾಪನೆಗೆ ಅಡಿಗಲ್ಲು ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
 ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ  ಅಥಣಿ ಮತಕ್ಷೇತ್ರಕ್ಕೆ ಸುಮಾರು 400 ಕೋಟಿ ರೂಪಾಯಿ ಕಾಮಗಾರಿಗಳಿಗೆ  ಸರಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಅನೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಮುಂಬರುವ ಒಂದುವರೆ ವರ್ಷದಲ್ಲಿ  ತಾಲೂಕಿನ ಜನತೆಗೆ ಪೂರಕವಾದ ಯೋಜನೆಗಳನ್ನು ತರುವ ಮೂಲಕ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
 ಬಡ್ಡಿರಹಿತ ಸಾಲ ಯೋಜನೆ : ಬೆಳಗಾವಿ ಜಿಲ್ಲಾ  ಮಧ್ಯವರ್ತಿ ಸಹಕಾರಿ ಸಂಘದ ಸದಸ್ಯರಾಗುವ ಮೂಲಕ  ಸಹಕಾರಿ ಅನುಭವದ ಮೇಲೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಳಿದ್ದಾಗ  ನನಗೆ ಸಹಕಾರ ಇಲಾಖೆಯ  ಸಚಿವ ಸ್ಥಾನ ನೀಡಿದರು. ಸುಮಾರು 20 ಲಕ್ಷ ರೈತ ಕುಟುಂಬಗಳಿಗೆ ಬಡ್ಡಿರಹಿತ ಸಾಲದ ಯೋಜನೆಯನ್ನು  ಭಾರತದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದಿರುವುದು, ಇದರಿಂದ ರೈತಾಪಿ ಜನರಿಗೆ ಬಹಳಷ್ಟು ಅನುಕೂಲವಾಗಿರುವುದು ನನಗೆ ಇಂದಿಗೂ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಅಥಣಿ ತಾಲೂಕಿನ  ಸುಮಾರು 78 ಸಹಕಾರಿ ಸಂಘಗಳಲ್ಲಿನ ಮೂರು ಕೋಟಿ ರೂಪಾಯಿ ಸಾಲವನ್ನು ಪ್ರತಿವರ್ಷದಂತೆ ನಾನು ಮರುಪಾವತಿ ಮಾಡುತ್ತೇನೆ. ರೈತರು ಖಾಸಗಿ ಸಾಲ ಮಾಡಿ  ಸಾಲ ಮರುಪಾವತಿ ಮಾಡುವ ಅಗತ್ಯವಿಲ್ಲ. ಅನೇಕ ವರ್ಷಗಳಿಂದ ನಾನು ರೈತರ ಸಾಲವನ್ನು ಮೂರು ಮರುಪಾವತಿ ಮಾಡುತ್ತಾ ಬಂದಿದ್ದೇನೆ. ಈ ಬಾರಿಯೂ  46  ಸಾವಿರ ಕುಟುಂಬಗಳ ಸಾಲ ಮರುಪಾವತಿ ಮಾಡುವ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿಕ್ಕೋಡಿ  ಉಪವಿಭಾಗಾಧಿಕಾರಿ  ಸಂತೋಷ ಕಾಮಗೊಂಡ ಮಾತನಾಡಿ ಜನರು ಮತ್ತು ರೈತರು ತಮ್ಮ ಕಾಗದ ಪತ್ರ  ಮತ್ತು ಸರ್ಕಾರದ ಸೌಲತ್ತು ಗಳಿಗಾಗಿ  ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಸರಕಾರ ಪ್ರತಿಯೊಂದು ಯೋಜನೆಗಳು ರೈತರ ಮತ್ತು ಜನರ ಮನೆಯ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ಗ್ರಾಮ ವಾಸ್ತವ್ಯ, ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ, ಗ್ರಾಮ ಒನ್  ಯೋಜನೆ, ಆಯುಷ್ಮಾನ್  ಆರೋಗ್ಯ ಯೋಜನೆ, ಯಶಸ್ವಿನಿ ಆರೋಗ್ಯ ಯೋಜನೆ ಇಂತಹ  ಅನೇಕ  ಯೋಜನೆಗಳನ್ನು ಆರಂಭಿಸಲಾಗಿದೆ. ಎಲ್ಲ ಯೋಜನೆಗಳನ್ನು  ಗ್ರಾಮ ಒನ್ ಇಲ್ಲವೇ ಬಾಪೂಜಿ ಕೇಂದ್ರದಲ್ಲಿ  ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆನೀಡಿದರು.
 ಇದೇ ಸಂದರ್ಭದಲ್ಲಿ  ದೇವರಡ್ಡೇರಹಟ್ಟಿ ಗ್ರಾಮಸ್ಥರು ಮತ್ತು ಹಡಪದ ಸಮಾಜ ಬಾಂಧವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿದರು. ಸಂದರ್ಭದಲ್ಲಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನ ಉದ್ಘಾಟಿಸಲಾಯಿತು.
 ಈ ವೇಳೆ  ಸಮಾರಂಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀಶೈಲ ನಾಯಕ, ಸಹಕಾರಿ ಧುರೀಣ ಶೇಖರ ಕನಕರೆಡ್ಡಿ, ಅಥಣಿ  ಬಿಡಿಸಿಸಿ ಬ್ಯಾಂಕ್ ನಿಯಂತ್ರಣಾಧಿಕಾರಿ  ಎಸ್ ಎಸ್ ನಂದೇಶ್ವರ, ಲಕ್ಷ್ಮಣ ಮೆಟಗುಡ್ಡ, ಶ್ರೀಶೈಲ್ ಇಟ್ನಾಳ, ಸಂಜಯ ಹನುಮಾಪುರ, ಶ್ರೀಮಂತ ಬೆಳ್ಳಂಕಿ, ಉಪ ತಹಶೀಲ್ದಾರ್ ಮಹದೇವ ಬಿರಾದರ, ಎ. ಬಿ ಡವಳೇಶ್ವರ, ಎಂ ಎಂ ಮಿರ್ಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಸವರಾಜ ಇಟ್ನಾಳ ಸ್ವಾಗತಿಸಿದರು. ಆರ್ ಬಿ ಭಜಂತ್ರಿ ನಿರೂಪಿಸಿದರು. ಸಿದ್ದಪ್ಪ ನಾಯಕ ವಂದಿಸಿದರು.