Belagavi News In Kannada | News Belgaum

ರಾಜ್ಯಮಟ್ಟದ 10 ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ವನಕಲ್ಲು ಶ್ರೀಗಳ ಪೀಠಾರೋಹಣ ದಶಮಾನೋತ್ಸವ ಸಮಾರಂಭ

ರಾಜ್ಯಮಟ್ಟದ 10 ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ವನಕಲ್ಲು ಶ್ರೀಗಳ ಪೀಠಾರೋಹಣ ದಶಮಾನೋತ್ಸವ ಸಮಾರಂಭ
————————————————————-
ಲೇಖಕ ಹಾಗೂ ಪತ್ರಕರ್ತ ಮಣ್ಣೆ ಮೋಹನ್ ಸಂಪಾದಕತ್ವದ “ಚುಟುಕು ಶ್ರೀ” ಹಾಗೂ “ಚುಟುಕು ದಶಕ’ ಕೃತಿಗಳ ಲೋಕಾರ್ಪಣೆ.
———————————————————————-
“ಅಕ್ಷರ ಆರಾಧನೆ ಮುಖ್ಯವಾಗಬೇಕೆ ಹೊರತು ಜಾತಿ ಮತ ಪಂಥಗಳ ಗೊಡವೆಯಲ್ಲ”.

“ಜಾತಿಯ ಸಂಕುಚಿತ ಮನೋಭಾವ ತೊರೆದು ಏಕತೆಯ ವೇದಿಕೆಯತ್ತ ಸಮಾನಮನಸ್ಕರು ಮುನ್ನಡೆವ ಆಂದೋಲನವನ್ನು ಸಾರುವ ಕಾರ್ಯವೀಗ ನಡೆಯಬೇಕಾಗಿದೆ. ಅಕ್ಷರ ಆರಾಧನೆ ಮುಖ್ಯವಾಗಿದೆ ಹೊರತು ಜಾತಿ ಮತ ಪಂಥಗಳ ಗೊಡವೆಯಲ್ಲ. ಎಲೆಮರೆಯಲ್ಲಿ ಅಡಗಿರುವ ಪ್ರತಿಭೆಯ ಮಾಗಿದ ಮನಸ್ಸುಗಳನ್ನು ಹುಡುಕಿ ಮುಕ್ತ ವೇದಿಕೆ ಒದಗಿಸುವ ಕಾರ್ಯವನ್ನು ಚುಟುಕು ಸಾಹಿತ್ಯ ಪರಿಷತ್ತು ಮಾಡುತ್ತಿದೆ”
ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಭಾಲ್ಕಿ ಪಟ್ಟದೇವರು ಡಾ. ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದರು. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ 10ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ವನಕಲ್ಲು ಶ್ರೀಗಳ ಪೀಠಾರೋಹಣದ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

“ಸುಧಾರಣೆ, ಪರಿವರ್ತನೆ, ಬದಲಾವಣೆ ಸಾಹಿತ್ಯದ ಮೂಲದ್ರವ್ಯ, ಮೂಲ ಸೆಲೆ. ಸಾಹಿತ್ಯವನ್ನು ರಚನೆ ಮಾಡುವವರು ಪರಿವರ್ತನೆಯನ್ನು, ಸುಧಾರಣೆಯನ್ನು ಹಾಗೂ ಸಾಧ್ಯವಾದರೆ ಬದಲಾವಣೆಯನ್ನು ಆಧಾರವಾಗಿಟ್ಟು ಕೊಳ್ಳಬೇಕು. ಈ ಮೂರು ಸ್ತರದ ಮೇಲೆ ಸಾಹಿತ್ಯ ರಚನೆ ಆಗುವುದಾದರೆ ಅಂತಹ ಸಾಹಿತ್ಯಕ್ಕೆ ಯಾವತ್ತಿಗೂ ಸಾವಿಲ್ಲ. ಈ ಮೂರು ಸ್ತರದಲ್ಲಿ ರಚನೆ ಮಾಡಲಾಗದವರ ಸಾಹಿತ್ಯ ಅಷ್ಟೊಂದು ಗಮನಾರ್ಹವಲ್ಲ, ಚಿಂತನಾರ್ಹವಲ್ಲ. ಜನಪರ ಜೀವಪರ – ಈ ಎರಡೂ ಆಶಯಗಳನ್ನಿಟ್ಟುಕೊಂಡ ಸಾಹಿತ್ಯವನ್ನು ಜನರು ಮುಂದೆ ಕೊಂಡೊಯ್ಯುತ್ತಾರೆ, ಪ್ರೇರಣೆಯನ್ನು ಪಡೆಯುತ್ತಾರೆ” ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶ್ರೀ ಶ್ರೀ ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

 

ಮುಂದುವರೆದು ಮಾತನಾಡಿದ ಅವರು “ಕೇವಲ ಓದಲಿಕ್ಕಾಗಿ ಓದುವುದಲ್ಲ. ಸಾಹಿತ್ಯವೂ ಕೂಡ ಪ್ರೇರಣೆಯನ್ನುಂಟು ಮಾಡುತ್ತದೆ, ಉಂಟುಮಾಡಬೇಕಾಗುತ್ತದೆ. ಸುಧಾರಣೆ, ಪರಿವರ್ತನೆ, ಬದಲಾವಣೆ ಇವೆಲ್ಲವುಗಳ ಮುಖಾಂತರವಾಗಿ ಸಮೂಹವನ್ನು ಪ್ರೇರಣೆಗೆ ಒಳಪಡಿಸಬಹುದು. ವ್ಯಕ್ತಿ ಸಾಹಿತ್ಯವನ್ನು ಪ್ರೇರಣೆಗೆ ಬಳಸಿಕೊಂಡಾಗ ಅದ್ಭುತವಾದ ಪರಿವರ್ತನೆಯನ್ನ ಕಾಣಲಿಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಾಹಿತಿಗಳು ಮತ್ತು ಅವರ ಸಾಹಿತ್ಯ ಪ್ರಯತ್ನವನ್ನು ಮಾಡಲಿ”

“ವರ್ಗರಹಿತ ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ
ಕಟ್ಟಿಕೊಟ್ಟಂತಹ ಅಲ್ಲಮ ಬಸವಾದಿ ಶರಣರ, ಪ್ರಪಂಚದ ಎಲ್ಲ ದಾರ್ಶನಿಕರ ಪ್ರೇರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ, ಶ್ರೀವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ವತಿಯಿಂದ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ಸಾಂಸ್ಕೃತಿಕ ಪ್ರತಿಭೋತ್ಸವ, ವನಕಲ್ಲು ಶ್ರೀ ಹಾಗೂ ಇತರೆ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುತ್ತಿರುವುದು ಖುಷಿ ಕೊಡುವ ವಿಷಯ. ಸಮ್ಮೇಳನದ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆಧ್ಯಾತ್ಮಿಕ ಜಿಜ್ಞಾಸೆ ಜೊತೆಗೆ ಶೈಕ್ಷಣಿಕವಾದ ತುಡಿತ ಅವರ ಭಾಷಣದಲ್ಲಿ ಇದೆ. ಇಂತಹ ಸ್ವಾಮಿಗಳನ್ನು ಆಯ್ಕೆ ಮಾಡಿರುವುದು ಸ್ತುತ್ಯಾರ್ಹ ವಾಗಿದೆ. ಹಾಗೆಯೇ ಈ ಕ್ಷೇತ್ರದ ಬಸವರಮಾನಂದ ಸ್ವಾಮೀಜಿಗಳು ಕೂಡ ಈ ಕ್ಷೇತ್ರದ ಮುನ್ನಡೆಯನ್ನು, ಸಂಘಟನೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ” ಎಂದು ಮೆಚ್ಚುಗೆಯ ಮಾತನಾಡಿದರು.

“ನಾವು ಮೀನನ್ನು ಹಿಡಿಯಬಾರದು, ಆದರೆ ಮೀನನ್ನು ಹಿಡಿಯುವುದನ್ನು ಕಲಿಸಬೇಕು. ಹಾಗೆಯೇ ಹಣಕೊಟ್ಟು ಮಠವನ್ನು ಕಟ್ಟಬಾರದು, ಭಕ್ತರಿಂದಲೇ ದೇಣಿಗೆ ಸಂಗ್ರಹಿಸಿ ಮಠವನ್ನು ಮುನ್ನಡೆಸಬೇಕು’ ಎಂಬ ಪಾಠವನ್ನು ನಮಗೆ ಕಲಿಸಿಕೊಟ್ಟವರು ಪರಮಪೂಜ್ಯ ಮುರುಘಾ ಶರಣರು. ಆ ಹಾದಿಯಲ್ಲಿ ಮುನ್ನಡೆದು ಮಠವನ್ನು ಕಟ್ಟಿದ್ದೇವೆ. ಇಲ್ಲಿನ ಸಮಸ್ಯೆಗಳಿಂದ ಬೇಸತ್ತು ಒಮ್ಮೆ ಪೂಜ್ಯ ಶರಣರಿಗೆ ಫೋನಾಯಿಸಿ ‘ನನಗೆ ಇಲ್ಲಿ ಇರಲು ಸಾಧ್ಯವಿಲ್ಲ’ ಎಂದಾಗ ಮುರುಘಾ ಶರಣರು ‘ಸಮಾಜದ ಸಂಘರ್ಷಗಳು ಬುದ್ಧ ಬಸವ ಅಂಬೇಡ್ಕರ್ ರವರನ್ನೇ ಬಿಟ್ಟಿಲ್ಲ. ಇನ್ನು ನಾವು ನೀವೆಲ್ಲ ಲೆಕ್ಕವೇ? ಇಂತಹ ಸಂಘರ್ಷಗಳ ಮಧ್ಯೆಯೇ ಸುಂದರ ಸಮಾಜವನ್ನು ನಿರ್ಮಿಸುವುದು ಸ್ವಾಮಿಗಳ ಕರ್ತವ್ಯವಾಗಬೇಕು. ಆ ಹಾದಿಯಲ್ಲಿ ನೀವು ಮುನ್ನಡೆಯಿರಿ’ ಎಂದು ಮಾರ್ಗದರ್ಶನ ನೀಡಿದರು. ಅದರ ಪ್ರತಿಫಲವೇ ಇಂದು 150 ಮಕ್ಕಳಿರುವ ಅನಾಥಾಶ್ರಮ,30 ವೃದ್ಧರಿರುವ ವೃದ್ಧಾಶ್ರಮ, 35 ಆಕಳಿರುವ ಗೋಶಾಲೆ ಮಠದ ವತಿಯಿಂದ ನಡೆಯುತ್ತಿರುವುದಕ್ಕೆ ಕಾರಣವಾಗಿದೆ” ಎಂದು ಡಾ. ಬಸವರಮಾನಂದ ಮಹಾಸ್ವಾಮಿಗಳು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು “ಇದಕ್ಕೆ ಟ್ರಸ್ಟಿನ ಎಲ್ಲ ಸದಸ್ಯರು ಹಾಗೂ ಭಕ್ತರು ಕಾರಣರಾಗಿದ್ದಾರೆ. ಸರ್ಕಾರದ 1ರೂ.ಅನುದಾನ ವಿಲ್ಲದೆ, ಕೇವಲ ಭಕ್ತರ ದೇಣಿಗೆಯಿಂದಲೇ ಇವೆಲ್ಲವೂ ನಡೆಯುತ್ತಿದೆ. ಶ್ರಮವಿಲ್ಲದೆ ಆಶ್ರಮ ಕಟ್ಟಲು ಸಾಧ್ಯವಿಲ್ಲ. ಹುರಿದ ಬೀಜ ಮತ್ತೆ ಹೇಗೆ ಮೊಳಕೆ ಒಡೆಯುವುದಿಲ್ಲವೋ ಹಾಗೆಯೇ ಎದುರಾಗುವ ಆರಂಭದ ಸಂಘರ್ಷಗಳು ಉರಿದಾದ ನಂತರ ಮತ್ತೆ ಬರುವ ಸಂಘರ್ಷಗಳನ್ನು ಸುಲಭವಾಗಿ ಎದುರಿಸಬಹುದು. ಬೇಡದ ಸಂಪ್ರದಾಯಗಳನ್ನು ಮುರಿದು ಹೊಸದಾಗಿ ಕಟ್ಟುವ ಕೆಲಸವನ್ನು ಚುಟುಕು ಸಾಹಿತ್ಯ ಪರಿಷತ್ ಮಾಡುತ್ತಿದೆ. ಅವರ ಕಾರ್ಯ ಶ್ಲಾಘನೀಯವಾದುದು” ಎಂದರು.

ಶೂನ್ಯ ಪೀಠದ ಪರಂಪರೆಯಂತೆ ಪೀಠಾರೋಹಣದ ದಶಮಾನೋತ್ಸವ ಪ್ರಯುಕ್ತ ವನಕಲ್ಲು ಶ್ರೀಗಳು, ಪರಮಪೂಜ್ಯ ಮುರುಘಾಶರಣರಿಂದ ಪೇಟಾ ಕಟ್ಟುವ ಆಶೀರ್ವಾದ ಕೋರಿಕೊಂಡರು. ಅದಕ್ಕೆ ಸಮ್ಮತಿಸಿದ ಮುರುಘಾ ಶರಣರು ಒಪ್ಪಿಗೆಯ ಆಶೀರ್ವಾದ ನೀಡಿದರು.

ಲೇಖಕ ಹಾಗೂ ಪತ್ರಕರ್ತ ಮಣ್ಣೆ ಮೋಹನ್ ಸಂಪಾದಕತ್ವದ “ಚುಟುಕು ಶ್ರೀ”ಕವನ ಸಂಕಲನ ಹಾಗೂ ಒಂದು ದಶಕದ ಚುಟುಕು ಸಾಹಿತ್ಯ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಒಳಗೊಂಡ “ಚುಟುಕು ದಶಕ’ ಎಂಬ ಕೃತಿಯನ್ನು ಮುರುಘಾ ಶರಣರು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು.

ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಚುಟುಕು ಕವಿಗೋಷ್ಠಿಯಲ್ಲಿ ನಾಡಿನಾದ್ಯಂತ ಎಲ್ಲಾ ಜಿಲ್ಲೆಗಳ 50 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಚುಟುಕುಗಳನ್ನು ವಾಚಿಸಿದರು. ಸಮಾರಂಭದ ಪಾವನ ಸಾನಿಧ್ಯವನ್ನು ಶ್ರೀ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಎಲ್ಲ ಪದಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್, ತಾಲ್ಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಮೈಲನನಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ಎನ್. ಕೃಷ್ಣಪ್ಪ, ತಾಲೂಕು ಅಧ್ಯಕ್ಷರಾದ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕರಾದ ವಿ ಮಂಜುಳಾ, ನಳಿನ ಮತ್ತು 30 ಕ್ಕೂ ಹೆಚ್ಚು ಹೆಣ್ಣುಮಕ್ಕಳ ತಂಡ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಿತು. ಚಿತ್ರಾ ಹೊನ್ನಾವರ ರವರ ಜೈಹಿಂದ್ ಕಲಾತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕವಿಗಳಾದ ನೆಗಳೂರು, ಎನ್ ಜಿ ಗೋಪಾಲ್, ಪ್ರಕಾಶ್ ಮೂರ್ತಿ, ಸದಾನಂದಾರಾಧ್ಯ, ವೆಂಕಟೇಶ್ ಆರ್ ಚೌತಾಯಿ, ಪ್ರಜಾಕವಿ ನಾಗರಾಜು, ತ್ಯಾಮಗೊಂಡ್ಲು ಅಂಬರೀಷ್, ಯೋಗಾನಂದ್ , ಡಾ.ಶಿವಲಿಂಗಯ್ಯ,ಕನಕರಾಜು, ಹರಳೂರು ಶಿವಕುಮಾರ್, ಜನಾರ್ದನ್,ಪರಿಸರ ಚಿಂತಕ ಕವಿ ನರಸಿಂಹಯ್ಯ, ಪ್ರಮೀಳಾ ಮಹದೇವ್, ಚೌಡೇಗೌಡರು, ಡಾ.ಯಶೋದಾ,ಕೇಶವಮೂರ್ತಿ,ಮಂಜು ಪಾವಗಡ,ಆರ್ ಪುಷ್ಪಾವತಿ, ಲಿಂಗರಾಜು ಎ ಕಾಳೇನಹಳ್ಳಿ ಮೇಷ್ಟ್ರು ,ಚೇತನ್ ತಾವರೆಕೆರೆ,ವಾಜರಹಳ್ಳಿ ನವೀನ್ ಮುಂತಾದವರು ಉಪಸ್ಥಿತರಿದ್ದರು. ಕಿರಿಯ ವಯಸ್ಸಿನಲ್ಲಿ ಪರ್ವತಾರೋಹಣದಲ್ಲಿ ಸಾಧನೆ ಮೆರೆದಿರುವ ದಿವ್ಯಶ್ರೀ ಮತ್ತು ಇತರ ಸಾಧಕರಿಗೆ, ಕವಿಗಳಿಗೆ, ದಾನಿಗಳಿಗೆ ಸನ್ಮಾನಿಸಲಾಯಿತು.

ವಿಶೇಷ ವರದಿ: ಮಣ್ಣೆ ಮೋಹನ್