Belagavi News In Kannada | News Belgaum

ಕಾರಾಗೃಹ ನಿವಾಸಿಗಳಿಗೆ “ಪೇಂಟಿಂಗ್” ತರಬೇತಿ ಶಿಬಿರ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣ ಕುಮಾರ ಇವರ ಮಾರ್ಗದರ್ಶನದಲ್ಲಿ

 

ಬೆಳಗಾವಿ : ಕಾರಾಗೃಹ ನಿವಾಸಿಗಳಿಗೆ “ಪೇಂಟಿಂಗ್” ತರಬೇತಿ ಶಿಬಿರ
ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣ ಕುಮಾರ ಇವರ ಮಾರ್ಗದರ್ಶನದಲ್ಲಿ ದಿ: 08/03/2022 ರಿಂದ 14/03/2022 ರವರೆಗೆ 07 (ಏಳು) ದಿನಗಳ “ಪೇಂಟಿಂಗ್” ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಸದರಿ ತರಬೇತಿಯು ಏಷಿಯನ್ ಪೇಂಟ್ಸ ಕಲರ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ತರಬೇತಿಯ ಸಮಾರೂಪ ಸಮಾರಂಭಕ್ಕೆ ಕಲರ್ ಅಕಾಡೆಮಿಯ ಕಾರ್ಯನಿರ್ವಾಹಕ ಅಧಿಕಾಗಳಾದ ಶ್ರೀ ಮಂಜುನಾಥ ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಹಾಯಕ ಅಧೀಕ್ಷಕರಾದ ಶ್ರೀ ಶಹಾಬುದ್ದೀನ್ ಕೆ. ವಹಿಸಿದ್ದರು.

ಮುಖ್ಯ ಅತಿಥಿಗಳಾದ ಶ್ರೀ ಮಂಜುನಾಥ ಹೆಗಡೆ ಮಾತನಾಡಿ ಏಷಿಯನ್ ಪೇಂಟ್ಸ ಕಲರ್ ಸಂಸ್ಥೆಯು ಸಾರ್ವಜನಿಕರಿಗೆ ಪೇಂಟಿಂಗ್ ತರಬೇತಿಯನ್ನು ಆಯೋಜಿಸುತ್ತ ಬಂದಿದೆ. ಆದರೆ ಕಾರಾಗೃಹದಲ್ಲಿ ನೀಡುವ ತರಬೇತಿಯು ವಿಶೇಷವಾಗಿರುತ್ತದೆ. ಜೀವನದಲ್ಲಿ ಆಕಸ್ಮಿಕವಾಗಿ ಜರುಗಿದ ಕಹಿ ಘಳಿಗೆಯಲ್ಲಿ ತಪ್ಪು ಮಾಡಿರಬಹುದು. ಅದಕ್ಕೆ ಭೂತಕಾಲದ ಬಗ್ಗೆ ಹೆಚ್ಚು ಚಿಂತಿಸದೇ ಭಾವೀ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಇಂತಹ

 

ತರಬೇತಿಗಳು ಅತಿ ಅವಶ್ಯಕ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಇನ್ನೂ ಹೆಚ್ಚಿನ ತರಬೇತಿಗಳನ್ನು ಆಯೋಜಿಸಲಾಗುವುದು ಎಂದು ಹೇಳೀದರು. ಅಲ್ಲದೇ ತರಬೇತಿಯ ಯಶಸ್ವಿಗೆ ಸಹಕಾರ ನೀಡಿದ ಕಾರಾಗೃದ ವರಿಷ್ಠಾಧಿಕಾರಿಗಳಾದ ಶ್ರೀ ಕೃಷ್ಣ ಕುಮಾರ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅಧೀಕ್ಷಕರಾದ ಶ್ರೀ ಶಹಾಬುದ್ದೀನ ಕೆ. ಮಾತನಾಡಿ ಕಾರಾಗೃಹದಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ವಿವಿಧ ತರಬೇತಿಗಳಲ್ಲಿ ಭಾಗವಹಿಸಬೇಕು. ಏಕೆಂದರೆ, ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂದಿನ ಆಧುನಿಕ ಯುಗದಲ್ಲಿ ಪೇಂಟಿಂಗ್ ಉದ್ಯಮವು ಆದಾಯ ತರುವ ಉದ್ಯಮವಾಗಿದೆ. ಬಿಡುಗಡೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಮರಳಿದ ನಂತರ ತಾವು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಲು ಈ ತರಬೇತಿಯು ಸಹಾಯವಾಗುತ್ತದೆ. ಇಲಾಖೆ ವತಿಯಿಂದ ಇನ್ನೂ ಅನೇಕ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.

 

ಹಾಗೂ ತಮ್ಮ ಕುಟುಂಬ ವರ್ಗದವರಿಗೆ ಹಾಗೂ ಇತರರಿಗೆ ಪೇಂಟಿಂಗ್ ಕುರಿತು ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ತರಬೇತಿ ಶಿಬಿರದ ಉಸ್ತುವಾರಿ ವಹಿಸಿದ್ದ ಶ್ರೀ ಶಶಿಕಾಂತ ಯಾದಗುಡೆ ಮಾತನಾಡಿ ಕಳೆದ 4 ವರ್ಷಗಳಲ್ಲಿ ಏಷಿಯನ್ ಪೇಂಟ್ಸ ಕಲರ್ ಸಂಸ್ಥೆಯು 3 ಬಾರಿ ಪೇಂಟಿಂಗ್ ತರಬೇತಿಯನ್ನು ಆಯೋಜಿಸಿರುತ್ತಾರೆ. ಸುಮಾರು 130 ಜನ ನಿವಾಸಿಗಳು ಈ ತರಬೇತಿ ಶಿಬಿರದಲ್ಲಿ ಬಾಗವಹಿಸಿರುತ್ತಾರೆ. ಕಾರಣ ಇಲಾಖೆಯು ಕಲರ್ ಅಕಾಡೆಮಿ ಸಂಸ್ಥೆಗೆ ಚಿರಋಣ ಯಾಗಿರುತ್ತದೆ. ಕಲರ್ ಅಕಾಡೆಮಿಯ ಸಿಬ್ಬಂದಿಯವರಾದ ಶ್ರೀ ಶ್ರೀಶೈಲ್ ಹುದ್ದಾರ, ಮಹೇಶ ತಳವಾರ ಹಾಗೂ ಮತ್ತುರಾಜ ತುಂಬಾ ಅಚ್ಚುಕಟ್ಟಾಗಿ ವಿಡಿಯೋ ಮೂಲಕ ಹಾಗೂ ಪ್ರಾಯೋಗಿಕವಾಗಿ ತರಬೇತಿ ನೀಡಿರುತ್ತಾರೆ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ 50 ಜನ ನಿವಾಸಿಗಳಿಗೆ ಏಷಿಯನ್ ಪೇಂಟ್ ಸಂಸ್ಥೆಯ ವತಿಯಿಂದ ಗುರುತಿನ ಚೀಟಿ ವಿತರಿಸಲಾಯಿತು.

 

ಕಾರ್ಯಕ್ರಮದಲ್ಲಿ ನಿವಾಸಿಗಳಾದ ಮಹಾಂತೇಶ, ಪಿ.ಎಮ್. ಇಸೂಬ ಹಾಗೂ ಮಹಮ್ಮದ ದೇಸಾಯಿ ತರಬೇತಿಯ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೂ ಮಹೇಶ ತಳವಾರ ಇವರ ಕನ್ನಡ ಹಾಡುಗಳನ್ನು ಹಾಡಿ ನಿವಾಸಿಗಳನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ತರಬೇತಿಯನ್ನು ನೀಡಿದ ಎಲ್ಲ ಸಿಬ್ಬಂದಿಗಳನ್ನು ಕಾರಾಗೃಹದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೈಲರ್‍ಗಳಾದ ಶ್ರೀ ಅಭಿಷೇಕ ಹಾಗೂ ಶ್ರೀ ರಾಜೇಶ ಧರಮಟ್ಟಿ ಉಪಸ್ಥಿತರು ಹಾಗೂ ಜೈಲರ್ ವೈ.ಎಸ್. ನಾಯಿಕ ತರಬೇತಿಯ ಮೇಲ್ವಿಚಾರಣೆ ವಹಿಸಿದ್ದರು. ಮಹೇಶ ತಳವಾರ ಪ್ರಾರ್ಥಿಸಿದರು. ಎಸ್.ಎಸ್. ಯಾದಗುಡೆ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.