Belagavi News In Kannada | News Belgaum

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರ ರಾಜೀನಾಮೆಯನ್ನು ಲೋಕಸಭಾ ಸಭಾಪತಿ ಓಂ ಬಿರ್ಲಾ ಮಂಗಳವಾರ ಅಂಗೀಕರಿಸಿದ್ದಾರೆ.

ಚಂಡೀಗಡ: ಪಂಜಾಬ್‌ನ ನಿಯೋಜಿತ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರ ರಾಜೀನಾಮೆಯನ್ನು ಲೋಕಸಭಾ ಸಭಾಪತಿ ಓಂ ಬಿರ್ಲಾ ಮಂಗಳವಾರ ಅಂಗೀಕರಿಸಿದ್ದಾರೆ.

 

ಸಂಸದರಾಗಿದ್ದ ಮಾನ್ ಅವರು, ಸೋಮವಾರ ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಸಂಗ್ರೂರ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಭಗವಂತ ಮಾನ್ ಅವರ ರಾಜೀನಾಮೆಯನ್ನು ನಾನು ಸ್ವೀಕರಿಸಿದ್ದೆ. ಮಾ.14 ರಿಂದಲೇ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ’ ಎಂದು ಬಿರ್ಲಾ ಟ್ವೀಟ್ ಮಾಡಿದ್ದಾರೆ.

 

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮವಾದ ಖಟಕಡಕಲಾನ್‌ನಲ್ಲಿ ಮಾರ್ಚ್ 16 ರಂದು ಮಧ್ಯಾಹ್ನ 12.30ಕ್ಕೆ ಪಂಜಾಬ್‌ನ 17ನೇ ಮುಖ್ಯಮಂತ್ರಿಯಾಗಿ ಮಾನ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 

ಸಂಗ್ರೂರ್‌ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮಾನ್ ಅವರು, ಪ್ರಸ್ತುತ ಧುರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 2017ರಲ್ಲಿ ಕೇವಲ 20 ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದರು.