Belagavi News In Kannada | News Belgaum

ರೈತರ ಮಕ್ಕಳಿಗೆ ಬಿಎಸ್‍ಸಿ ಪದವಿಯಲ್ಲಿ ಶೇ. 50 ರಷ್ಟು ಪ್ರವೇಶಕ್ಕೆ ಅವಕಾಶ: ಕೃಷಿ ಸಚಿವ ಬಿ.ಸಿ.ಪಾಟೀಲ

ಚಿಕ್ಕೋಡಿ: ರೈತರ ಮಕ್ಕಳಿಗೆ ಬಿಎಸ್‍ಸಿ ಪದವಿಯಲ್ಲಿ ಶೇ. 50 ರಷ್ಟು ಪ್ರವೇಶಕ್ಕೆ ಅವಕಾಶ ಕೊಡುವ ಜತೆಗೆ ರೈತರ ಮಕ್ಕಳಿಗೆ ಉನ್ನತ ಅಧ್ಯಯನಕ್ಕಾಗಿ ಶಿಷ್ಯವೇತನ ನೀಡುವಂತಹ ವಿಶೇಷ ಯೋಜನೆಯನ್ನು ರಾಜ್ಯ ಸರಕಾರಿ ಜಾರಿಗೆ ತಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ತಾಲೂಕಿನ ಅಂಕಲಿಯ ಶಿವಾಲಯದಲ್ಲಿ ಸೋಮವಾರ ಸಂಜೆ ಐಸಿಎಆರ್-ಅಟಾರಿ ಬೆಂಗಳೂರು, ಕೆಎಲ್‍ಇ ಸಂಸ್ಥೆ ಬೆಳಗಾವಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ.ಬೆಳಗಾವಿ, ಐಸಿಎಆರ್-ಐಐಎಸ್‍ಆರ್, ಇಂದೋರ್, ಐಸಿಎಆರ್-ಎಸ್‍ಬಿಐ ಕೊಯಂಬತ್ತೂರ, ಸಿಬಿಕೆಎಸ್‍ಎಸ್‍ಕೆಎಮ್ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸೋಯಾಬಿನ್ ಹಾಗೂ ಕಬ್ಬು ಬೆಳೆಯುವ ರೈತರ, ವಿಜ್ಞಾನಿಗಳ ಮತ್ತು ಉದ್ಯಮಿಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಹೆಣ್ಣು ಮಕ್ಕಳಿಗೆ ಪ್ರೌಢ ಶಿಕ್ಷಣದಿಂದ 2000 ಶಿಷ್ಯವೇತನ ನೀಡುವ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ ಎಂದರು.

ರಾಜ್ಯ ಸರಕಾರ ಪ್ರಸಕ್ತ ಬಜೆಟ್‍ದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಹೂವಿನ ಹಡಗಲಿ ತಾಲೂಕುಗಳಲ್ಲಿ ಕೃಷಿ ವಿಜ್ಞಾನ ಮಹಾವಿದ್ಯಾಲಯ ಆರಂಭಿಸಲು ಅನುದಾನ ಕಾಯ್ದಿರಿಸಿದೆ. ಚಿಕ್ಕೋಡಿ ಭಾಗದಲ್ಲಿಯೂ ಒಂದು ಕೃಷಿ ವಿಜ್ಞಾನ ಮಹಾವಿದ್ಯಾಲಯ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದರೇ ಅದಕ್ಕೂ ಮಂಜೂರಾತಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರೈತರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳುವ ಮುಖಾಂತರ ಹೊಸ ಹೊಸ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಮಿಶ್ರ ಬೆಳೆ ಬೆಳೆಯುವ ಮುಖಾಂತರ ಹೆಚ್ಚು ಆದಾಯ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಬೇಕು ಎಂದರು.
ಸಾವಿರಾರು ಜನರಿಗೆ ಉದ್ಯೋಗ ಕೊಡುವಂತಹ ಶಕ್ತಿ ನಮ್ಮ ರೈತರಲ್ಲಿದೇ. ಕೃಷಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೈತರ ಹೊಲಗಳಿಗೆ ತೆರಳಿ ರೈತರಿಗೆ ಕೃಷಿಯಲ್ಲಿನ ಹೊಸ ಹೊಸ ಬದಲಾವಣೆಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಕೆಎಲ್‍ಇ ಸಂಸ್ಥೆ ಇಲ್ಲದೇ ಹೋಗಿದ್ದರೇ ನಮ್ಮ ಗತಿ ಏನಾಗುತ್ತಿತ್ತು. ಎಂಬುದನ್ನು ಊಹಿಸಿಕೊಳ್ಳಲು ಸಹ ನಮ್ಮಿಂದ ಸಾಧ್ಯವಿಲ್ಲ ಎಂದರು.
ಹನಿ ನೀರಾವರಿ ಸೇರಿದಂತೆ ರೈತರಿಗೆ ಶೇ. ಶೇ.90ರ ರಿಯಾಯತಿ ದರದಲ್ಲಿ ಸರಕಾರದಿಂದ ನೀರಾವರಿ ಯೋಜನೆ ಕೊಡಲಾಗುತ್ತಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಈ ದೇಶದಲ್ಲಿರುವ ದೊಡ್ಡ ದೊಡ್ಡ ಉದ್ಯಮಿ ಶ್ರೀಮಂತರಿಗೂ ಈ ದೇಶಕ್ಕೆ ಅನ್ನಕೊಡುತ್ತೇವೆಂದು ಹೇಳಲು ಸಾಧ್ಯವಿಲ್ಲ.

ಈ ದೇಶದ ರೈತರಿಗೆ ಮಾತ್ರ ಅನ್ನ ಕೊಡುವ ತಾಕತ್ತಿದೆ. ಇಂದು ಕೃಷಿಗೆ ಮಹತ್ವ  ಬಂದಿದೆ. ಕೃಷಿಯತ್ತ ಯುವ ಜನಾಂಗ ವಾಲುತ್ತಿದೆ ಎಂದರು.
ಮಾಜಿ ರಾಜ್ಯ ಸಭಾ ಸದಸ್ಯರು ಮತ್ತು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ  ಅಧ್ಯಕ್ಷತೆವಹಿಸಿ, ಇಂದಿನ ಆಧುನಿಕ ಜಗತ್ತಿಗೆ ತಕ್ಕಂತೆ ರೈತರು ಬದಲಾವಣೆಯಾಗಬೇಕು. ರೈತರು ಕಬ್ಬಿನ ಜತೆಗೆ ಸೊಯಾಭಿನ್ ಮುಂತಾದ ಮಿಶ್ರ ಬೆಳೆಗಳನ್ನು ಬೆಳೆಯುವ ಮುಖಾಂತರ ಆರ್ಥಿಕ ಸಬಲತೆ ಸಾಧಿಸುವ ಮೂಲಕ ಸ್ವಾಭಿಮಾನದಿಂದ ಬಾಳಿ ಬದುಕಲು ರೈತರು ಮುಂದಾಗಬೇಕು ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ರಾಜು ಮುನ್ನೋಳಿ, ಬೆಂಗಳೂರಿನ ಐಸಿಎಆರ್ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್, ಇಂದೋರ್‍ನ ಐಸಿಎಆರ್‍ನ ನಿರ್ದೇಶಕಿ ಡಾ. ನೀತಾ ಖಾಂಡೇಕರ, ಎಸ್‍ಎನ್‍ಎಸ್ ಬೆಳಗಾವಿ ನಿರ್ದೇಶಕ ಡಾ. ಆರ್.ಬಿ.ಖಂಡಗಾಂವಿ, ತುಕಾರಾಮ ಪಾಟೀಲ, ಮಹೇಶ ಭಾತೆ, ಡಾ. ರಾಜೇಶ ನೇರ್ಲಿ ಹಾಗೂ ಚಿಕ್ಕೋಡಿ ಚಿದಾನಂದ ಕೊರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರು ಹಾಗೂ ರೈತರು ಮ್ತು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೆಎಲ್‍ಇ ನಿರ್ದೇಶಕ ಬಿ.ಆರ್.ಪಾಟೀಲ ಸ್ವಾಗತಿಸಿದರು.