Belagavi News In Kannada | News Belgaum

ಭವ್ಯಭಾರತ ದೇಶ ಮುನ್ನಡೆಸುವ ಮಹತ್ತರ ಜವಾಬ್ದಾರಿ ಯುವಜನರ ಮೇಲಿದೆ – ಎಮ್.ಜಿ.ಹಿರೇಮಠ

ಬೆಳಗಾವಿ : ಇಂದಿನ ಯುವ ಸಮೂಹ ಶಿಕ್ಷಣ ಕಲಿಯುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪ್ರಜ್ಞೆಯನ್ನು ಬೆಳೆಸಿಕೊಂಡು ಪ್ರಗತಿದಾಯಕ ನಾಡ ಕಟ್ಟಲು ಮುಂದಾಗಬೇಕು. ಜೊತೆಗೆ ಭವ್ಯಭಾರತ ದೇಶ ಮುನ್ನಡೆಸುವ ಮಹತ್ತರ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ದೇಶಕ್ಕೆ ಯುವಜನರ ಸದ್ಬಳಕೆಯಾಗಬೇಕಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಎಮ್.ಜಿ.ಹಿರೇಮಠ ಯುವಜನರ ಕುರಿತು ಅಭಿವ್ಯಕ್ತ ಪಡಿಸಿದರು.

ಅವರು ಕಳೆದ ದಿನಾಂಕ 15 ಮಾರ್ಚ 2022 ರಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಬೆಳಗಾವಿ, ಸ್ಥಳೀಯ ಕೆ.ಎಲ್.ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಎನ್.ಎಸ್.ಎಸ್ ಘಟಕ ಬೆಳಗಾವಿ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರದಲ್ಲಿ ಕೆ.ಎಲ್.ಇ ಸಂಸ್ಥೆಯ ಜಿರಿಗೆ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸರ್ಕಾದ ಅಭಿವೃದ್ಧಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹೋಗಿ ಮುಟ್ಟಬೇಕೆಂದರೆ ಯುವ ಸಂಘಟನೆಗಳು ಸರ್ಕಾರ, ಸಮುದಾಯದ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಯುವಜನರಿಗೆ ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ ಬಸವರಾಜ ಮಿಲ್ಲಾನಟ್ಟಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇವರು ಮಾತನಾಡಿ ಹಳ್ಳಿಗಳಿಂದ ಕೂಡಿದ ನಮ್ಮ ಭಾರತದೇಶ ಇಂದಿನ ಯುವಜನರು ನಿರುದ್ಯೋಗಿಗಳಾಗಿ ಉಳಿಯದೆ ಕೌಶಲ್ಯ, ಕಲಾತ್ಮಕ ಕಲೆಗಳನ್ನು ಕಲಿತು ಆರ್ಥಿಕ ಸುಧಾರಣೆ ಜೊತೆಗೆ ಯುವ ಸಂಘಟನೆಗಳು ಸಮೂದಾಯಕ್ಕೆ ಒಳಿತಾಗುವ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಸುಭದ್ರ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಡಾ.ಎಸ್.ಬಾಲಾಜಿ ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆ ಕೂಡ ಹಿಂದೆ ಬಿಳುತ್ತಿದ್ದು, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಆಧುನಿಕ ಕೃಷಿ ಬಗ್ಗೆ ಇಂದಿನ ಯುವಜನರು ಹೆಚ್ಚು ಒಲವು ತೋರಿಸಬೇಕು. ಯಾವುದೇ ಕ್ಷೇತ್ರದಲ್ಲಿ ಯುವಜನರು ಸಾಧನೆ ಮಾಡುವಂತಹ ಅವಕಾಶವಿರುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ತರಬೇತಿಗಳನ್ನು ಪಡೆದು ಕಾರ್ಯ ಮಾಡಲು ಸನ್ನದ್ದರಾಗಬೇಕೆಂದು.

ಡಾ. ವ್ಹಿ.ಎ.ಕೋಟಿವಾಲೆ ರಜಿಸ್ಟ್ರಾರ ಕೆ.ಎಲ್.ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಬೆಳಗಾವಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ವೇದಿಕೆಯ ಮೇಲೆ ಎಸ್.ಯು.ಜಮಾದಾರ, ಆರ್.ಆರ್. ಮುತಾಲಿಕ ದೇಸಾಯಿ, ಭರತ ಕಲಾಚಂದ್ರ, ಸಿದ್ದಣ್ಣ ದುರದುಂಡಿ, ಮಲ್ಲಯ್ಯಾ ಕರಡಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಮಾಡಿದ ಚಿಕ್ಕೋಡಿ ತಾಲೂಕಿನ ಧುಳಗನವಾಡಿಯ ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘಕ್ಕೆ ಮಾಣ್ಯ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಯುವ ಸಂಘ ಪ್ರಶಸ್ತಿಯನ್ನು ಪ್ರಶಸ್ತಿ ಫಲಕ ನೀಡಿ ಗೌರವಿಸಿದು.

ಸಂಪನ್ಮೂಲ ವ್ಯಕ್ತಿ ಬಸವಪ್ರಭು ಹಿರೇಮಠ- ಕೌಶಲ್ಯ ಭಾರತ, ಬಿ.ಜಿ.ಪಾಟೀಲ – ಯುವಜನರು ಮತ್ತು ಸಮುದಾಯದ ಅಭಿವೃದ್ಧಿ, ಡಾ. ಹರಪ್ರೀತ ಕೌರ- ಲಿಂಗ ಸಂವೇದನೆ, ಡಾ. ಸ್ನೇಹಲ್ ಧರ್ಮಾಯತ- ಸ್ವಚ್ಛ ಭಾರತ ವಿಷಯಗಳ ಮೇಲೆ ಯುವಜನರಿಗೆ ಉಪನ್ಯಾಸ ನೀಡಿದರು.

ನೆಹರು ಯುವ ಕೇಂದ್ರದ ಜಿಲ್ಲಾಯುವ ಅಧಿಕಾರಿಗಳಾದ ರೋಹಿತ ಕಲರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಸಂಯೋಜಕರಾಧ ಡಾ. ಅಶ್ವೀನಿ ನರಸನ್ನವರ ಸ್ವಾಗತಿಸಿದರು. ಕನಿಕಾ.ಎಮ್ ಕಾರ್ಯಕ್ರಮ ನಿರುಪಿಸಿದರು. ಮಹಮ್ಮದ ರಾಹಿಲ ವಂದಿಸಿದರು.