Belagavi News In Kannada | News Belgaum

ಕನ್ನಡ ಖ್ಯಾತ ನಟಿ ಸಹೋದರನ ವಿರುದ್ಧ ದೂರು ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಸಹೋದರನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಾಫ್ಟ್‍ವೇರ್ ಕಂಪೆನಿಯ ಉದ್ಯೋಗಿಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‍ಠಾಣೆಗೆ ದೂರು ನೀಡಿದ್ದಾರೆ.

ಮ್ಯಾಟರಿಮೋನಿ ವೆಬ್‍ಸೈಟ್ ಶಾದಿ ಡಾಟ್ ಕಾಮ್‍ನಲ್ಲಿ ಈ ಮಹಿಳಾ ಉದ್ಯೋಗಿ ಸ್ವ ವಿವರ ಹಾಕಿದ್ದು, ಕಳೆದ ಮೇ ತಿಂಗಳಿನಲ್ಲಿ ಖ್ಯಾತ ನಟಿಯೊಬ್ಬರ ಸಹೋದರನ ಪರಿಚಯವಾಗಿದೆ. ಆ ಸಂದರ್ಭದಲ್ಲಿ ಆತ, ನಾನು ಪ್ರತಿಷ್ಠಿತ ಕಂಪೆನಿಯ ಉನ್ನತ ಹುದ್ದೆಯಲ್ಲಿದ್ದೇನೆ, ನನ್ನ ಸಹೋದರಿ ಖ್ಯಾತ ಸಿನಿಮಾ ನಟಿ ಎಂದು ಹೇಳಿಕೊಂಡಿದ್ದಾನೆ.

ಬಳಿಕ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಪರಸ್ಪರ ಚಾಟಿಂಗ್ ಮಾಡುತ್ತಿದ್ದರು. ಅದೇ ಸಲುಗೆಯಿಂದ ಆತನ ಹುಟ್ಟುಹಬ್ಬಕ್ಕೆ ಐಪೋನ್, ಲ್ಯಾಪ್‍ಟಾಪ್, ಆ್ಯಪಲ್ ವಾಚ್ ಸೇರಿದಂತೆ ಬೆಲೆಬಾಳುವವಸ್ತುಗಳನ್ನು ಯುವತಿ ನೀಡಿದ್ದಾರೆ .

ತದನಂತರ ಇವರಿಬ್ಬರು ಆತ್ಮೀಯರಾಗಿದ್ದು, ಅದೇ ಸಲುಗೆಯಿಂದ ಜನವರಿ 18 ರಂದು ಜಯನಗರದ ಖಾಸಗಿ ಹೊಟೇಲ್‍ಗೆ ಯುವತಿಯನ್ನು ಕರೆಸಿಕೊಂಡ ಆರೋಪಿ, ವಿವಿಧ ಆಶ್ವಾಸನೆ ನೀಡಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ತದನಂತರ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೋಸ ಮಾಡಿದ್ದಾನೆ ಎಂದು ನೊಂದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಆತನ ವಿರುದ್ಧ ದೂರು ನೀಡಿದ್ದಾರೆ.ಖ್ಯಾತ ನಟಿಯ ಸಹೋದರನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ./////