Belagavi News In Kannada | News Belgaum

ರಾಮದುರ್ಗದಲ್ಲಿರುವ ಆಯಿಲ್ ಮಿಲ್ ಗೆ ಬೆಂಕಿ: ಅಪಾರ ಹಾನಿ

ರಾಮದುರ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಆಯಿಲ್ ಮಿಲ್ ಗೆ ಬೆಂಕಿ ಆವರಿಸಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರಾಮದುರ್ಗ ಪಟ್ಟಣದ ಸಿದ್ದಪ್ಪ ಮುಳ್ಳೂರ ಎಂಬುವರ ಒಡೆತನದ ಸಿದ್ದೇಶ್ವರ ಆಯಿಲ್ ಇಂಡಸ್ಟ್ರೀಸ್‍ನ ಮುಳ್ಳೂರ ಆಯಿಲ್ ಮಿಲ್ ನಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್‍ನಿಂದ ಬೆಂಕಿ ತಗುಲಿ ಶೆಂಗಾ, ಏಣ್ಣೆ, ಹಾಗೂ ಮಿಲ್ಲಿನ ಅನೇಕ ವಸ್ತುಗಳು ಸೇರಿ ಅಂದಾಜು 18 ರಿಂದ 20 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಮಂಗಳವಾರ ರಾತ್ರಿವೇಳೆ ಎಂದಿನಂತೆ ಕೆಲಸ ಮುಗಿಸಿಕೊಂಡು ಅಲ್ಲಿನ ಸಿಬ್ಬಂದಿಗಳು ಮನೆಗೆ ತೆರಳಿದ್ದಾರೆ. ಬುಧವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ಆಗಿ ಇಡೀ ಮಿಲ್ ತುಂಬಾ ಬೆಂಕಿ ಆವರಿಸಿಕೊಂಡಿದೆ.

ಬೆಂಕಿ ತಗಲಿರುವ ಸುದ್ದಿ ತಿಳಿದು ದೌಡಾಯಿಸಿದ ಮಾಲೀಕರು ಅಗ್ನಿ ಶಾಮಕದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಇಡೀ ಆಯಿಲ್ ಮಿಲ್ ತುಂಬಾ ಬೆಂಕಿ ಆವರಿಸಿ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಆದರೂ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////