Belagavi News In Kannada | News Belgaum

ಸಿನಿಮಾ ವೀಕ್ಷಣೆ ಬಿಟ್ಟು, ಶಾಸಕರು ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲಿ: ಸಭಾಧ್ಯಕ್ಷರಿಗೆ ಗಡಾದ ಪತ್ರ

ಬೆಳಗಾವಿ:  ಮಂತ್ರಿ ಮಾಲ್ ನಲ್ಲಿ ಶಾಸಕರುಗಳಿಗೆ “ದಿ ಕಾಶ್ಮೀರ್ ಪೈಲ್” ಸಿನಿಮಾ ವೀಕ್ಷಣೆಗೆ ಆದೇಶ ಮಾಡುವ ಬದಲು “ನೆರೆ ಸಂತ್ರಸ್ತರ ಮನೆ ಹಾಗೂ ಬೆಳೆ ಪರಿಹಾರ ಮತ್ತು ಅವರ ಕ್ಷೇತ್ರದಲ್ಲಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನಿರ್ದೇಶನ ನೀಡಬೇಕು ಎಂದು ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ  ಒತ್ತಾಯಿಸಿದ್ದಾರೆ.

ಈ ಕುರಿತು ಕಾಗೇರಿ ಹಾಗೂ ಹೊರಟ್ಟಿ ಅವರಿಗೆ ಪತ್ರ ಬರೆದಿರುವ ಗಡಾದ ಅವರು, ರಾಜ್ಯದ ಸಾರ್ವಜನಿಕರಅದರಲ್ಲೂ ನೆರೆ ಸಂತ್ರಸ್ತರ ಕುಟುಂಬಗಳ ಪರವಾಗಿ ವಿನಂತಿಸಿಕೊಳ್ಳುವುದೆನೆಂದರೆ ಪ್ರಜಾಪ್ರಭುತ್ವದ ಪವಿತ್ರ ದೇಗುಲಗಳು ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತು ಮತ್ತು ವಿಧಾನ ಸಭೆಗಳಲ್ಲಿ ಪ್ರತಿ ಗಂಟೆಗೆ ಸುಮಾರು 52 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ನಡೆಸಲಾಗುತ್ತಿರುವ ಅಧಿವೇಶನದ ಸಮಯದಲ್ಲಿ ನಮ್ಮಜನಪ್ರತಿನಿಧಿಗಳು ತಪ್ಪದೇ ಭಾಗವಹಿಸದೇ ಇರುವದು ಮತ್ತು ಇವರುಗಳು ಸದನಗಳಲ್ಲಿ ನಡೆದುಕೊಳ್ಳುವ ರೀತಿಗಳನ್ನು ಗಮನಿಸಿದಾಗ ಅಧಿವೇಶನದ ಘನತೆ ಗೌರವಗಳಿಗೆ ಚ್ಯುತಿಯುಂಟಾಗಿದೆ.

ಪರಿಸ್ಥಿತಿ ಹೀಗಿರುವಾಗ ತಾವುಗಳು “ದಿ ಕಾಶ್ಮೀರಿ ಪೈಲ್” ಸಿನಿಮಾ ವೀಕ್ಷಣೆಗೆ ಮಂತ್ರಿ ಮಾಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಸದಸ್ಯರುಗಳು ಈ ಸಿನಿಮಾ ವೀಕ್ಷಣೆ ಮಾಡಬೇಕು ಎಂದು ಸದನದಲ್ಲಿ ಪ್ರಕಟಣೆ ಮಾಡಿದ್ದು ಸದನಗಳ ಘನತೆಗೆ ಹೆಚ್ಚಿನ ಧಕ್ಕೆಯುಂಟಾಗಿರುವದು ಎಂಬ ಭಾವನೆಗಳು ರಾಜ್ಯದ ಸಾರ್ವಜನಿಕರ ಮನದಲ್ಲಿ ಮೂಡಿರುತ್ತವೆ.

2019ರ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ನದಿತೀರಗಳಲ್ಲಿರುವ ಗ್ರಾಮಗಳೆಲ್ಲವು ಸಂಪೂರ್ಣವಾಗಿ ಜಲಾವೃತಗೊಂಡು ಲಕ್ಷಾಂತರ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ ಅಲ್ಲದೆ ರೈತರು ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿರುತ್ತವೆ. ಸುಮಾರು 31 ತಿಂಗಳುಗಳು ಕಳೆದರೂ ಕೂಡಾ ಅನೇಕ ಕುಟುಂಬಗಳಿಗೆ ಮನೆ ಹಾಗೂ ಬೆಳೆ ಪರಿಹಾರ ಸಿಗದೇ ಬೀದಿ ಪಾಲಾಗಿರುತ್ತವೆ. ಇಂಥಹ ಕ್ಷೇತ್ರಗಳ ಶಾಸಕರುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವದಿಲ್ಲ.

ಈ ಕುರಿತು ನೆರೆ ಸಂತ್ರಸ್ತರ ಅಳಲು ಪರಿಹರಿಸುವಂತೆ ತಾವುಗಳು ಶಾಸಕರುಗಳಿಗೆ ಕಟ್ಟು ನಿಟ್ಟಿನ ನಿರ್ದೇಶನಗಳನ್ನು ನೀಡಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಭೀಮಪ್ಪ ಗಡಾದ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ./////