Belagavi News In Kannada | News Belgaum

ಬೆಳಗಾವಿ ಮೇಯರ್-ಉಪಮೇಯರ್‌ ಚುನಾವಣೆಗೆ ದಾರಿ ಸುಗಮ

ಬೆಳಗಾವಿ: ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಮೀಸಲಾತಿಯನ್ನು ಪ್ರಶ್ನಿಸಿ ಪಾಲಿಕೆಯ ಪಕ್ಷೇತರ ಸದಸ್ಯ ಶಂಕರ ಪಾಟೀಲ ಅವರು ಧಾರವಾಡ ಹೈಕೋರ್ಟ್ ನಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ತಿರಸ್ಕತಗೊಂಡಿದೆ.

ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಹಾದಿ ಇದರಿಂದ  ಸುಗಮಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಅಂತ್ಯ ಅಥವಾ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮಹಾನಗರಕ್ಕೆ  ನೂತನ ಮೇಯರ್ ಮತ್ತು ಉಪಮೇಯರ್ ದೊರೆಯಲಿದ್ದಾರೆ.

ಹೈಕೋರ್ಟಿನಲ್ಲಿ ಅರ್ಜಿ ತಿರಸ್ಕೃತಗೊಂಡಿದ್ದರಿಂದ ಪಾಲಿಕೆಯ ಎಲ್ಲ ಸದಸ್ಯರ ಹೆಸರುಗಳನ್ನು ರಾಜ್ಯ ಗೆಜೆಟ್ ನಲ್ಲಿ ಹೊಸದಾಗಿ ನಮೂದಿಸಲಾಗಿದೆ.

ಕಳೆದ ದಿ. 11 ರಂದು ಆ ಪ್ರತಿಯನ್ನು ನಗರಾಭಿವೃದ್ಧಿ ಇಲಾಖೆಯು ಮಹಾನಗರ ಪಾಲಿಕೆಗೆ ಬುಧವಾರ ಕಳಿಸಿಕೊಡಲಾಗಿದೆ. ಹೀಗಾಗಿ ಮೇಯರ್, ಉಪಮೇಯರ್ ಚುನಾವಣೆಗೆ ಇದ್ದ ಎಲ್ಲ ಅಡೆತಡೆಗಳು ದೂರವಾದಂತಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾ ಬಿಸ್ವಾಸ್ ಅವರು ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.

ಸೆ. 3 ರಂದು ಪಾಲಿಕೆಯ ಚುನಾವಣೆ ನಡೆದು ಸೆ.6ರಂದು ಫಲಿತಾಂಶ ಪ್ರಕಟಗೊಂಡಿತ್ತು. ಆಗಲೇ ಎಲ್ಲ ನಗರಸೇವಕರ ಹೆಸರುಗಳು ರಾಜ್ಯ ಗೆಜೆಟ್ ನಲ್ಲಿ ಸಮೂದಿಸಲಾಗಿದ್ದವು. ಆದರೆ ನಗರಾಭಿವೃದ್ಧಿ ಇಲಾಖೆ ಮೇಯರ್-ಉಪಮೇಯರ್ ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಲು ವಿಳಂಬ ಮಾಡಿದ್ದರಿಂದ ಚುನಾವಣೆ ನಡೆದಿರಲಿಲ್ಲ.////