Belagavi News In Kannada | News Belgaum

ದಂತದ ಮೇಲಿನ ದುರಾಸೆಗೆ ಒಂಟಿಸಲಗ ಕೊಂದ ಕಿರಾತಕರು

ಹಾಸನ: ಕಾಡಾನೆಯ ದಂತದ ಮೇಲೆ ದುರಾಸೆ ಪಟ್ಟು ವಿದ್ಯುತ್ ಶಾಕ್ ನೀಡಿ ಆನೆಯನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ನೂರಕ್ಕು ಹೆಚ್ಚು ಕಾಡಾನೆಗಳಿದ್ದು ಸಕಲೇಶಪುರ, ಆಲೂರು, ಬೇಲೂರು ಹಾಗೂ ಹಾಸನ ತಾಲೂಕಿನಲ್ಲಿ ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಹಾಸನ ತಾಲೂಕಿನ ಸೀಗೆಗುಡ್ಡ ಅರಣ್ಯ ಪ್ರದೇಶದಲ್ಲಿ ಮೂರು ಕಾಡಾನೆಗಳು ಬೀಡುಬಿಟ್ಟಿದ್ದವು. ಅದರಲ್ಲಿ ಒಂದು ಸಲಗ ಹಾಸನ ನಗರಕ್ಕೆ ಎರಡು ಭಾರಿ ಎಂಟ್ರಿ ಕೊಟ್ಟು ಇಬ್ಬರನ್ನು ಬಲಿ ಪಡೆದಿತ್ತು. ನಂತರ ಅದನ್ನು ಸೆರೆಹಿಡಿಯಲಾಯಿತು. ಉಳಿದ ಎರಡು ಕಾಡಾನೆಗಳು ಸಾಲಗಾಮೆ, ಸೀಗೆಗುಡ್ಡದ ಸುತ್ತಮುತ್ತ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದವು.
ರಾತ್ರಿ ವೇಳೆ ಒಂಟಿಸಲಗವೊಂದು ಆಹಾರ ಹರಸಿ ವೀರಾಪುರದ ಬಳಿ ರೈತರ ಜಮೀನಿಗೆ ಆಗಾಗ್ಗೆ ಬರುತ್ತಿತ್ತು. ಕಾಡಾನೆಗೆ ಎರಡು ಉದ್ದದ ದಂತಗಳಿದ್ದು ಇದನ್ನು ಗಮನಿಸಿದ್ದ ಚಂದ್ರೇಗೌಡ, ತಮ್ಮಯ್ಯ ಹಾಗೂ ಪಾಪಯ್ಯ ದಂತಗಳ ಮೇಲೆ ಕಣ್ಣಿಟ್ಟಿದ್ದರು. ಕಳೆದ ಆರು ತಿಂಗಳು ಹಿಂದೆ ರಾತ್ರಿ ವೇಳೆ ಕಾಡಾನೆ ಆಹಾರ ಹುಡುಕಿಕೊಂಡು ತಮ್ಮಯ್ಯನ ಜಮೀನಿನ ಸಮೀಪ ಬಂದಿದೆ. ಕಾಡಾನೆ ಬರುವುದನ್ನೇ ಹೊಂಚು ಹಾಕಿ ಕಾಯುತ್ತಿದ್ದ ಹಂತಕರು ಜಮೀನಿನ ಬಳಿ ಇದ್ದ ವಿದ್ಯುತ್ ಕಂಬಕ್ಕೆ ವೈಯರ್ ಕನೆಕ್ಟ್ ಮಾಡಿ, ಕಾಡಾನೆ ಇದ್ದ ಜಾಗದಲ್ಲಿ ವೈಯರ್ ಬಿಸಾಡಿದ್ದು ಇದು ತಗುಲಿದ ಕೂಡಲೇ ವಿದ್ಯುತ್ ಶಾಕ್ ನಿಂದ ಕಾಡಾನೆ ಸ್ಥಳದಲ್ಲಿಯೇ ಮೃತಪಟ್ಟಿದೆ.
ಕಾಡಾನೆ ಮೃತಪಟ್ಟ ನಂತರ ದಂತಗಳನ್ನು ಕಿತ್ತುಕೊಂಡು ಜೆಸಿಬಿ ಮೂಲಕ ತಮ್ಮಯ್ಯನ ಜಮೀನಿನಲ್ಲಿ ಆಳವಾದ ಗುಂಡಿ ತೋಡಿ ಯಾರಿಗೂ ಅನುಮಾನ ಬಾರದಂತೆ ಹೂತುಹಾಕಿದ್ದರು. ಬಳಿಕ ಮಾ.18 ರಂದು ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ದಂತಗಳನ್ನು ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇಂದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಹೂತು ಹಾಕಿದ್ದ ಆನೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸುಡಲಾಯಿತು.
ಹಣದ ದುರಾಸೆಯಿಂದ ಆಹಾರ ಹರಸಿ ನಾಡಿಗೆ ಬಂದಿದ್ದ ಒಂಟಿಸಲಗವನ್ನು ವಿದ್ಯುತ್ ಶಾಕ್ ಕೊಟ್ಟು ಕೊಂದಿದ್ದ ಆರೋಪಿಗಳು ಅಂದರ್ ಆಗಿದ್ದು, ಹೂಳಲು ಬಳಸಿದ್ದ ಜೆಸಿಬಿ ಹಾಗೂ ಅದರ ಮಾಲೀಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್‍ನಲ್ಲಿ ಪ್ರಕರಣ ದಾಖಲಾಗಿದೆ./////