ಹಿಜಾಬ್ ತೀರ್ಪು ನೀಡಿದ ಮೂರು ನ್ಯಾಯಮೂರ್ತಿಗಳಿಗೆ ವೈ ದರ್ಜೆಯ ಭದ್ರತೆ

ಬೆಂಗಳೂರು: ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಸಹಿಸದೆ, ನಿರ್ಧಾಕ್ಷಿಣ್ಯವಾಗಿ ದಮನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಜಾಬ್ ಕುರಿತು ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಲಾಗಿದೆ. ಈ ಕುರಿತು ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದೇಶ ದ್ರೋಹಿ ಶಕ್ತಿಗಳು ಈ ದೇಶದ ವ್ಯವಸ್ಥೆಗೆ ಸವಾಲು ಹಾಕುವ ಕೆಲಸ ಮಾಡುತ್ತಿವೆ.
ನ್ಯಾಯಾಲಯಗಳ ತೀರ್ಪನ್ನು ಎಲ್ಲರೂ ಒಪ್ಪಲೇ ಬೇಕು. ಇಲ್ಲವಾದರೆ ಮೇಲ್ಮನವಿ ಸಲ್ಲಿಸಲು ಅವಕಾಶಗಳಿವೆ. ಅದನ್ನು ಬಿಟ್ಟು ವ್ಯವಸ್ಥೆಗೆ ಸವಾಲು ಹಾಕುವುದು ಸರಿಯಲ್ಲ. ಹಿಂದೆಂದು ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಹೇಳಿದರು.
ವಿಚ್ಛಿದ್ರಕಾರಿ ಶಕ್ತಿಗಳು ಪ್ರಚೋದನೆಯ ಮೂಲಕ ಜನರನ್ನು ಬಡಿದೆಬ್ಬಿಸುತ್ತಿವೆ. ಇಂತಹ ಶಕ್ತಿಗಳನ್ನು ನಾವು ದಮನ ಮಾಡಲೇಬೇಕಿದೆ. ಈಗಾಗಲೇ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ವಕೀಲರ ಸಂಘದ ಪದಾಧಿಕಾರಿಗಳು ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಾಗಿದೆ. ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.
ಈಗಾಗಲೇ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ತಮಿಳುನಾಡಿನಲ್ಲಿ ತನಿಖೆ ಮಾಡಿದ ಬಳಿಕ ಆರೋಪಿಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಬೇಕು, ಕಠಿಣ ಸೆಕ್ಷನ್ಗಳನ್ನು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿರುವುದಾಗಿ ಹೇಳಿದರು.
ಮೂರು ಜನ ನ್ಯಾಯಾಧೀಶರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈವರೆಗಿನ ಭದ್ರತೆಯ ಜೊತೆಗೆ ವೈ ದರ್ಜೆಯ ಭದ್ರತೆ ನೀಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಸವಾಲುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ಸರ್ಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತದೆ. ಆದರೆ ಸೋ ಕಾಲ್ಡ್ ಜ್ಯಾತ್ಯತೀತರು ಘಟನೆ ನಡೆದು ಮೂರು ದಿನಗಳಾದರೂ ಯಾಕೆ ಖಂಡನೆ ಮಾಡಿಲ್ಲ, ಮೌನವಾಗಿರುವುದೇಕೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ನ್ಯಾಯಾಧಿಶರಿಗೆ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲೂ ಡೋಂಗಿ ಜಾತ್ಯತೀತರು ಮೌನವಾಗಿರುವುದು ಪ್ರಶ್ನಾರ್ಹವಾಗಿದೆ. ನ್ಯಾಯಾೀಧಿಶರಿಗೆ ಅಪಘಾತವಾದರೆ, ಏನಾದರೂ ಅನಾಹುತ ನಡೆದರೆ ನಾವು ಜವಾಬ್ದಾರರಲ್ಲ ಎಂಬ ಮಾತುಗಳನ್ನು ವಿಚ್ಛಿದ್ರಕಾರಿ ಶಕ್ತಿಗಳು ಹೇಳಿದ್ದಾರೆ. ಒಂದು ವರ್ಗದ ಓಲೈಕೆ ನಿಜವಾದ ಜಾತ್ಯತೀತವಲ್ಲ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಿಂದಲೇ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿದೆ.
ಅಂತಹ ನ್ಯಾಯಾಂಗಕ್ಕೂ ಬೆದರಿಕೆ ಹಾಕಿದಾಗ ಪ್ರತಿಕ್ರಿಯಿಸದೆ ಇರುವುದು ಅಕ್ಷಮ್ಯ. ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ಹೇಳಿದರು.
/////