ಮೂವರು ಪಿಎಸ್ಐಗಳು ಒಂದೇ ಕುಟುಂಬದಲ್ಲಿ

ಚಾಮರಾಜನಗರ: ಚಾಮರಾಜನಗರದ ಮಾದಲವಾಡಿ ಗ್ರಾಮದಲ್ಲಿ ಸಹೋದರ ಮತ್ತು ಸಹೋದರಿ ಸೇರಿದಂತೆ ಮೂವರು ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಚಾಮರಾಜನಗರ ತಾಲೂಕಿನ ಮಾದಲವಾಡಿ ಗ್ರಾಮದ ಚಂದ್ರು ಹಾಗೂ ಶಾಂತಮ್ಮ ದಂಪತಿಯ ಮಕ್ಕಳಾದ ರವಿಕುಮಾರ್, ಸುಗುಣ ಹಾಗೂ ಪ್ರಭು ಎಂಬುವರೇ ಇವತ್ತು ಪೊಲೀಸ್ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಶಿಕ್ಷಣ ಮತ್ತು ಪೂರ್ವ ಸಿದ್ಧತೆಗಳೊಂದಿಗೆ ಪಿಎಸ್ಐ ಹುದ್ದೆ ಪಡೆದು ಗ್ರಾಮದ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಹಿರಿಯ ಪುತ್ರ ರವಿಕುಮಾರ್ ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರೆ. ಇನ್ನೊಬ್ಬ ಸಹೋದರ ಪ್ರಭು ಸಿವಿಲ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿ ಪ್ರಸ್ತುತ ಕಲಬುರ್ಗಿಯಲ್ಲಿ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಹೋದರಿ ಸುಗುಣ ಪಿಎಸ್ಐ ಪರೀಕ್ಷೆಯಲ್ಲಿ 94 ನೇ ರಾಂಕ್ ಪಡೆದು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ರವಿಕುಮಾರ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಪಡೆದು, 8-10 ನೇ ತರಗತಿಯನ್ನು ಬೊಮ್ಮನಹಳ್ಳಿಯಲ್ಲಿ, ತೆರಕಣಾಂಬಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಗುಂಡ್ಲುಪೇಟೆ ಜೆಎಸ್ಎಸ್ ಕಾಲೇಜಿನಲ್ಲಿ ಬಿಎ (ಎಚ್ಇಪಿ), ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎ (ಅರ್ಥಶಾಸ್ತ್ರ) ಮಾಡಿರುವ ಇವರು ಎಂಎ ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದರಿಂದ ಎಂಎ ಮುಗಿದ ತಕ್ಷಣವೇ 2014-15 ರಲ್ಲಿ ಸಿಪಿಸಿಯಾಗಿ ಮೈಸೂರಿನ ನಗರಕ್ಕೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಾ 2018-19 ನೇ ಸಾಲಿನಲ್ಲಿ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾದರು. ಪ್ರಸ್ತುತ ಹಾವೇರಿ ಜಿಲ್ಲೆಯ ಶಿಗ್ಗಾವ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಭು ಕೂಡಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ಗುಂಡ್ಲುಪೇಟೆಯ ಜೆಎಸ್ಎಸ್ ಶಾಲೆಯಲ್ಲಿ, ಪಿಯುಸಿ (ಕಾಮರ್ಸ್) ಯನ್ನು ದೊಡ್ಡುಂಡಿ ಭೋಗಪ್ಪ ಕಾಲೇಜಿನಲ್ಲಿ, ಪದವಿ ಶಿಕ್ಷಣ (ಬಿಕಾಂ) ವನ್ನು ಮೈಸೂರಿನ ಮಹಾಜನ ಕಾಲೇಜಿನಲ್ಲಿ ಮುಗಿಸುತ್ತಲೇ ತನ್ನ 22 ನೇ ವಯಸ್ಸಿಗೆ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ.
ಸುಗುಣ ಕೂಡ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು, ಪ್ರೌಢ ಶಿಕ್ಷಣವನ್ನು ಬೊಮ್ಮನಹಳ್ಳಿಯಲ್ಲಿ, ಪಿಯುಸಿಯನ್ನು ತೆರಕಣಾಂಬಿಯ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಮೈಸೂರಿನಲ್ಲಿ ಎರಡು ವರ್ಷಗಳ ಕಾಲ ಗ್ರಂಥಾಲಯದಲ್ಲಿ ಸತತವಾಗಿ ಓದಿಕೊಂಡು, ನಂತರ ಅಣ್ಣ ಹಾಗೂ ತಮ್ಮನಿಂದ ಒಂದಷ್ಟು ಮಾರ್ಗದರ್ಶನವನ್ನು ಪಡೆದು 2020-21ನೇ ಸಾಲಿನ ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ಇವರು ಪದವಿ ಶಿಕ್ಷಣ ಮುಗಿಸಿದ ನಂತರ ತಲಾ ಎರಡು ಬಾರಿ ಎಫ್ಡಿಎ, ಎಸ್ಡಿಎ ಹಾಗೂ ಪಿಎಸ್ಐ ಪರೀಕ್ಷೆ ಬರೆದಿದ್ದಾರೆ. ಕೊನೆಗೆ 2020-21ನೇ ಸಾಲಿನಲ್ಲಿ ಮೂರನೇ ಬಾರಿಗೆ ಬರೆದ ಪಿಎಸ್ಐ ಪರೀಕ್ಷೆಯಲ್ಲಿ 94 ನೇ ರಾಂಕ್ ನೊಂದಿಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮಾದರಿ; ಈ ಮೂವರು ಇಂದಿನ ಯುವಪೀಳಿಗೆಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ, ಇವರು ಸದಾಕಾಲ ಓದುವುದರ ಜೊತೆಗೆ ಸತತವಾಗಿ ಪ್ರಯತ್ನ ಪಡುತ್ತಲೇ ಬಂದಿದ್ದರು. ಪದವಿ ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪ್ರಯತ್ನ ಮಾಡಿದರೆ ಉತ್ತಮ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.