Belagavi News In Kannada | News Belgaum

500 ರೂಪಾಯಿಗಾಗಿ ಸೆಕ್ಯೂರಿಟಿ ಗಾರ್ಡ್ ಕೊಲೆ

ಬೆಂಗಳೂರು: ಕೇವಲ 500 ರೂ.ಗಾಗಿ ಪುಟ್‍ಪಾತ್‍ನಲ್ಲಿ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಯುವಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಬಂಧಿತ ಆರೋಪಿ. ಮಾ.15ರಂದು ಕೃಷ್ಣಪ್ಪ(64) ಮಲಗಿದ್ದಾಗ ಇವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಅವರ ಜೇಬಿನಿಂದ 500 ರೂ. ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದನು. ಈ ಬಗ್ಗೆ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್‍ಪೆಕ್ಟರ್ ಜಗದೀಶ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳ ಒಂದು ವಿಶೇಷ ತಂಡ ರಚನೆ ಮಾಡಿಕೊಂಡು ಸುಮಾರು ನೂರಕ್ಕೂ ಹೆಚ್ಚಿನ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆಹಚ್ಚಿ ಬಂಧಿಸಿದೆ.

ಆರೋಪಿಯು ಕುಣಿಗಲ್-ಬೆಂಗಳೂರು ಮಾರ್ಗದ ಖಾಸಗಿ ಬಸ್ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು , ತನ್ನ ಮೋಜಿನ ಜೀವನಕ್ಕಾಗಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ದುರುದ್ದೇಶ ಹೊಂದಿದ್ದನು. ಮಾ.15ರಂದು ರಾತ್ರಿ ಸುಮಾರು 1.30ರ ಸುಮಾರಿನಲ್ಲಿ ಪೀಣ್ಯ 2ನೆ ಹಂತದ ಬಸ್ ನಿಲ್ದಾಣದ ಬಳಿ ಪುಟ್‍ಪಾತ್ ರಸ್ತೆಯಲ್ಲಿ ಮಲಗಿದ್ದ ಕೃಷ್ಣಪ್ಪ ಎಂಬುವರಿಗೆ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು ಕಲ್ಲು ಎತ್ತಿ ಹಾಕಿ, ಅವರ ಜೇಬಿನಲ್ಲಿದ್ದ 500 ರೂ.ಗಳನ್ನು ತೆಗೆದುಕೊಂಡು ಹೋಗಿ ಆ ಹಣವನ್ನು ಮೋಜಿನ ಜೀವನಕ್ಕೆ ಖರ್ಚು ಮಾಡಿಕೊಂಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ವೆಂಕಟೇಶ್ ನಾಯ್ಡು ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.