Belagavi News In Kannada | News Belgaum

ವಿಜ್ಞಾನ ಮಹಾವಿದ್ಯಾಲಯದಲ್ಲಿ 2021-22ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುವ ಹಾಗೂ ಪಾರಿತೋಷಕ ವಿತರಣಾ ಸಮಾರಂಭ

ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2021-22ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುವ ಹಾಗೂ ಪಾರಿತೋಷಕ ವಿತರಣಾ ಸಮಾರಂಭವು ದಿನಾಂಕ 22-03-2022 ರಂದು ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಗದಗ ಜಿಲ್ಲೆಯ ನರಗುಂದ ಪುರಸಭೆಯ ಗ್ರೇಡ್-1 ಮುಖ್ಯಾಧಿಕಾರಿಗಳಾದ ಶ್ರೀ. ಅಮಿತ ಎ. ತಾರದಾಳೆ ಅವರು ಆಗಮಿಸಿ ಮಾತನಾಡುತ್ತಾ, ಉತ್ತರ ಕರ್ನಾಟಕಕ್ಕೆ ಕೆ.ಎಲ್.ಇ. ಸಂಸ್ಥೆಯ ಕೊಡುಗೆ ಅಪಾರವಾದುದು. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಸರಿಯಾದ ಮಾರ್ಗದಲ್ಲಿ ಹೆಜ್ಜೆ ಹಾಕಬೇಕು. ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ವಿಶ್ವಾಸವಿರಬೇಕು. ಶಾಂತವಾದ ಮನಸ್ಸಿನಿಂದ ಅಧ್ಯಯನ ಮಾಡಿದರೆ ಯಶಸ್ಸು ಸಿಗುತ್ತದೆ. ಪಿಯುಸಿ ಹಂತ ವಿದ್ಯಾರ್ಥಿ ಜೀವನದಲ್ಲಿ ಸಂಕೀರ್ಣ ಘಟ್ಟವಾಗಿದೆ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳಾದ ಜಾಲತಾಣ, ಅಂತರಜಾಲಗಳ ಸದುಪಯೋಗ ಪಡಿಸಿಕೊಂಡು ಜೀವನದ ಗುರಿ ಮುಟ್ಟಬೇಕು. ಯಶಸ್ಸಿನ ಕಿರಣಗಳು ಹೊಳೆಯುತ್ತಿರುತ್ತವೆ. ಕಠಿಣ ಪರಿಶ್ರಮ ಮತ್ತು ಜಾಣ್ಮೆಯಿಂದ ಕಾರ್ಯಗಳನ್ನು ಮಾಡುತ್ತ, ಅಧ್ಯಯನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಧೈರ್ಯದಿಂದ ನಿರ್ಣಯ ತೆಗೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.(ಶ್ರೀಮತಿ.) ಜ್ಯೋತಿ ಎಸ್. ಕವಳೇಕರ ಅವರು ಮಾತನಾಡುತ್ತಾ, ವೇಳೆಯ ಸದುಪಯೋಗಪಡಿಸಿಕೊಂಡು ತಾಳ್ಮೆಯಿಂದ ಸ್ಪಂದಿಸುವ ಗುಣಗಳನ್ನು ಕಲಿಯಬೇಕು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುತ್ತಾ ಗುರಿಯನ್ನು ತಲುಪಬೇಕು ಎಂದು ನುಡಿದರು.

ಪ್ರಾರಂಭದಲ್ಲಿ ಪದವಿ ಪೂರ್ವ ಪ್ರಾಚಾರ್ಯರಾದ ಶ್ರೀ. ವಿಶ್ವನಾಥ ಕಾಮಗೋಳ ಅವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ. ಸಂಸ್ಥೆಯ ಆಜೀವ ಸದಸ್ಯರುಗಳಾದ ಶ್ರೀ. ಎಸ್.ಜಿ. ನಂಜಪ್ಪನವರ ಹಾಗೂ ಡಾ.ಸತೀಶ ಎಮ್.ಪಿ. ಅವರುಗಳು ಉಪಸ್ಥಿತರಿದ್ದರು.
ಇದೇ ಸುಸಂದರ್ಭದಲ್ಲಿ ರಾಜಾವಾಣಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಾರಂಭದಲ್ಲಿ ಕುಮಾರಿ. ಶ್ರದ್ಧಾ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಶ್ರೀಮತಿ. ವರ್ಷಾ ಭದ್ರಿ ವಂದಿಸಿದರು. ಮಿಸ್. ಎಸ್.ಬಿ. ಮಡಿವಾಳರ ಮುಖ್ಯಅತಿಥಿಗಳನ್ನು ಪರಿಚಯಿಸಿದರು. ಪೂರ್ಣಿಮಾ ರವಿಲ್ಲಾ, ವಿಜಯಲಕ್ಷ್ಮೀ ಕರೋಶಿ, ಸಂಗಮೇಶ ಕರಬನ್ನವರ, ವೀರಾಜ ಚಿತ್ರಗಾರ, ಬನಸಿಧರ ಪಾಟೀಲ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸುಸಂದರ್ಭದಲ್ಲಿ ಕುಮಾರಿ. ವಿಜಯಲಕ್ಷ್ಮೀ ಕರೋಶಿ ಮಹಾವಿದ್ಯಾಲಯದ ಆದರ್ಶ ವಿದ್ಯಾರ್ಥಿನಿ ಹಾಗೂ ಕುಮಾರ. ಸಂಗಮೇಶ ಕರಬನ್ನವರ ಮಹಾವಿದ್ಯಾಲಯದ ಆದರ್ಶ ವಿದ್ಯಾರ್ಥಿ ಎಂದು ಪಾರಿತೋಷಕ ಪಡೆದರು. ಕ್ರೀಡಾ ಚಟುವಟಿಕೆಗಳ ಪಾರಿತೋಷಕ ವಿತರಣಾ ಕಾರ್ಯಕ್ರಮವನ್ನು ಡಾ. ಎಸ್.ಎ. ಮೋದಗಿ ನಡೆಸಿಕೊಟ್ಟರು. ಕುಮಾರಿ. ಸೃಷ್ಠಿ ಹಾಗೂ ಕುಮಾರಿ. ನಿಕಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾವಚಿತ್ರದಲ್ಲಿ: ನರಗುಂದ ಪುರಸಭೆಯ ಗ್ರೇಡ್-1 ಮುಖ್ಯಾಧಿಕಾರಿಗಳಾದ ಶ್ರೀ. ಅಮಿತ ಎ. ತಾರದಾಳೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ, ವೇದಿಕೆಯ ಮೇಲೆ ಪದವಿ ಪೂರ್ವ ಪ್ರಾಚಾರ್ಯರಾದ ಶ್ರೀ. ವಿಶ್ವನಾಥ ಕಾಮಗೋಳ ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.(ಶ್ರೀಮತಿ.) ಜ್ಯೋತಿ ಎಸ್. ಕವಳೇಕರ ಅವರು ಉಪಸ್ಥಿತರಿದ್ದಾರೆ.