Belagavi News In Kannada | News Belgaum

ನಾಳೆಯಿಂದ ಐಪಿಎಲ್‌ ಕಾದಾಟ ಮೊದಲನೇಯ ದಿನ ಸಿಎಸ್‌ಕೆ- ಕೆಕೆಆರ್‌ ಸೆಣಸಾಟ

ಮುಂಬೈ: 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಗೆ ಕ್ಷಣಗಣನೆ ಶುರುವಾಗಿದ್ದು,  ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌  ಸೆಣಸಾಡಲಿವೆ.

ಶನಿವಾರ ಮುಂಜಾಣೆ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿ ಕಾದಾಟ ನಡೆಸಲಿವೆ.

ಈ ಎರಡೂ ತಂಡಗಳು ತಮ್ಮ-ತಮ್ಮ ನೂತನ ನಾಯಕರೊಂದಿಗೆ ಕಣಕ್ಕೆ ಇಳಿಯಲಿವೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ರವಿಂದ್ರ ಜಡೇಜಾ ಮುನ್ನಡೆಸಿದರೆ, ಕೋಲ್ಕತಾ ನೈಟ್‌ ರೈಡರ್ಸ್ ತಂಡದ ನಾಯಕತ್ವವನ್ನು ಶ್ರೇಯಸ್‌ ಅಯ್ಯರ್‌ ವಹಿಸಿಕೊಳ್ಳಲಿದ್ದಾರೆ.
ಮಾರ್ಚ್‌ 26 ರಿಂದ ಆರಂಭವಾಗಲಿರುವ 2022ರ ಐಪಿಎಲ್‌ ಕ್ರಿಕೆಟ್‌ ಟೂರ್ನಿ. ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌-ಕೋಲ್ಕತಾ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಹಣಾಹಣಿ. ಕೋವಿಡ್‌-19 ಕಾರಣದಿಂದಾಗಿ ಈ ಬಾರಿ ಟೂರ್ನಿಯ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಮೆಗಾ ಹರಾಜಿನ ಮೂಲಕ ಬಲಿಷ್ಠ ತಂಡವನ್ನು ಕಟ್ಟಿರುವ ಎರಡೂ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ತಮ್ಮ-ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಿವೆ. ಇದರಲ್ಲಿ ಕೆಲ ಆಟಗಾರರು ರಾಷ್ಟ್ರೀಯ ತಂಡದ ಸೇವೆ ಮತ್ತು ಗಾಯದಿಂದಾಗಿ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಶಾರೂಖ್‌ ಖಾನ್ ಒಡೆತನದ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಈ ಬಾರಿ ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ. ಕಳೆದ 2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್‌ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಬಂದಿರುವ ಅಯ್ಯರ್‌, ಗಂಭೀರ್‌ ಹಾದಿಯಲ್ಲಿ ನಡೆಯಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.

ಮತ್ತೊಂದೆಡೆ ಎಂಎಸ್‌ ಧೋನಿ ಗುರುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಎಂಎಸ್‌ಡಿ ಐಪಿಎಲ್‌ ಟೂರ್ನಿಯಲ್ಲಿ ಕೇವಲ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಆಡಲಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಚಾಂಪಿಯನ್ಸ್ ಆಗಿದೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಫ್ರಾಂಚೈಸಿ 4ನೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಸಿಎಸ್‌ಕೆ: ಋತುರಾಜ್‌ ಗಾಯಕ್ವಾಡ್‌, ಡೆವೋನ್‌ ಕಾನ್ವೇ, ರಾಬಿನ್‌ ಉತ್ತಪ್ಪ, ಅಂಬಾಟಿ ರಾಯುಡು, ಶಿವಂ ದುಬೇ, ಎಂಎಸ್‌ ಧೋನಿ(ವಿ.ಕೀ), ರವೀಂದ್ರ ಜಡೇಜಾ(ನಾಯಕ), ಡ್ವೆನ್‌ ಬ್ರಾವೊ, ಕ್ರಿಸ್‌ ಜೋರ್ಡನ್‌, ರಾಜವರ್ಧನ್‌ ಹಂಗರ್ಗೇಕರ್‌, ಆಡಂ ಮಿಲ್ನೆ

ಕೆಕೆಆರ್‌: ವೆಂಕಟೇಶ್‌ ಅಯ್ಯರ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌(ನಾಯಕ), ನಿತೀಶ್‌ ರಾಣಾ, ಸ್ಯಾಮ್‌ ಬಿಲ್ಲಿಂಗ್ಸ್‌, ಆಂಡ್ರೆ ರಸೆಲ್‌, ಸುನೀಲ್‌ ನರೇನ್‌, ಟಿಮ್‌ ಸೌಥೀ, ಶಿವಮ್‌ ಮಾವಿ, ಉಮೇಶ್‌ ಯಾದವ್‌, ವರುಣ್ ಚಕ್ರವರ್ತಿ/////