Belagavi News In Kannada | News Belgaum

ಸೈಕಲ್‌ ​ ಏರಿ ಗಸ್ತು ಸಿಬ್ಬಂದಿಗೆ ಶಾಕ್​ ಕೊಟ್ಟ ಮಹಿಳಾ ಐಪಿಎಸ್​ ಅಧಿಕಾರಿ

ಚೆನ್ನೈ: ರಾತ್ರಿ ಸಮಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ಹಿನ್ನೆಲೆಯಲ್ಲಿ  ನಗರದಲ್ಲಿ ಗಸ್ತು ಸಿಬ್ಬಂದಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ಮಧ್ಯರಾತ್ರಿ ಸಿವಿಲ್​ ಡ್ರೆಸ್​ನಲ್ಲಿ ಸೈಕಲ್​ನಲ್ಲಿ ನಗರವನ್ನೆಲ್ಲ ಸುತ್ತಾಡಿರುವ ಅಪರೂಪದ ಪ್ರಸಂಗ ಜರುಗಿದೆ.

ಉತ್ತರ ಚೆನ್ನೈ ವಲಯದಲ್ಲಿ ಗಸ್ತು ಸಿಬ್ಬಂದಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಲು 2008ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಹಾಗೂ ಉತ್ತರ ಗ್ರೇಟರ್​ ಚೆನ್ನೈ ಪೊಲೀಸ್​ ವಿಭಾಗದ ಜಂಟಿ ಪೊಲೀಸ್​ ಆಯುಕ್ತರಾದ ಆರ್​. ವಿ. ರಮ್ಯಾ ಭಾರತಿ ಅವರು ಮಧ್ಯರಾತ್ರಿ ಸೈಕಲ್ ನಲ್ಲಿ ನಗರದ ಪ್ರಮುಖ ಏರಿಯಾಗಳಲ್ಲಿ ಸುತ್ತಾಟ ನಡೆಸಿದ್ದಾರೆ.

ಸ್ಪೋರ್ಟ್ಸ್​ ಟಿ ಶರ್ಟ್​ ಮತ್ತು ಪ್ಯಾಂಟ್​ ಧರಿಸಿ ಶುಕ್ರವಾರ ಮಧ್ಯರಾತ್ರಿ  ಸೈಕಲ್​ ಸವಾರಿ ಮಾಡಿದ್ದಾರೆ. ಈ ವೇಳೆ ಅವರ ಭದ್ರತಾ ಸಿಬ್ಬಂದಿ ಜತೆಗಿದ್ದರು ಮತ್ತು ರಮ್ಯಾ ಭಾರತಿ ಅವರಿಗೆ ಮಾರ್ಗವನ್ನು ತೋರಿಸುತ್ತಿದ್ದರು. ತಡರಾತ್ರಿ 2:45ಕ್ಕೆ ಚೆನ್ನೈನ ವಾರ್​ ಮೊಮೊರಿಯಲ್​ನಲ್ಲಿ ಪಯಣ ಆರಂಭಿಸಿದ ರಮ್ಯಾ ಅವರು ಮುತ್ತುಸ್ವಾಮಿ ಸೇತುವೆ, ರಾಜಾ ಅಣ್ಣಮಲೈ ಮಂದ್ರಮ್​, ಎಸ್ಪ್ಲಾನೇಡ್ ರಸ್ತೆ, ಕುರಲಗಾಮ್​, ಎನ್​ಎಸ್​ಸಿ ಬೋಸ್​ ರಸ್ತೆ ಮತ್ತು ಗೋವಿಂದಪ್ಪ ನಾಯ್ಕನ್ ಸ್ಟ್ರೀಟ್ ಮೂಲಕ

 

ಸಂಚರಿಸಿದರು. ಅಲ್ಲದೆ, ಆರ್​.ಕೆ. ನಗರ, ತೊಂಡಿಯಾರ್ಪೇಟ್​ ಮತ್ತು ಥಿರುವೊತ್ತಿಯೂರ್​ ಮುಖ್ಯರಸ್ತೆ ಸೇರಿದಂತೆ ಸುಮಾರು 10 ಕಿ.ಮೀ ಏರಿಯಾವನ್ನು ಕವರ್​ ಮಾಡಿದರು.
ಎಲ್ಲಿ ಗಸ್ತು ವಾಹನ ಮತ್ತು ಸಿಬ್ಬಂದಿ ಪ್ರತ್ಯಕ್ಷರಾಗುತ್ತಾರೋ ಅಲ್ಲೆಲ್ಲ ಸೈಕಲ್​ ನಿಲ್ಲಿಸಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿ, ಗಸ್ತು ಸಿಬ್ಬಂದಿ ನಿರ್ವಹಿಸುವ ದಿನಚರಿಯಲ್ಲಿ ತಮ್ಮ ಭೇಟಿಯನ್ನು ನಮೂದಿಸುತ್ತಿದ್ದರು.